ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಆಸ್ಪತ್ರೆಯ ಸಿಸಿಟಿವಿಗಳನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಿಸಲಾಗಿತ್ತು ಎಂದು ಅಪೋಲೊ ಆಸ್ಪತ್ರೆಯು ಅಫಿದಾವಿತ್ ನಲ್ಲಿ ಹೇಳಿದೆ.
ಅರ್ಮುಗ ಸ್ವಾಮಿ ಸಮಿತಿಗೆ ಅಫಿದಾವಿತ್ ಸಲ್ಲಿಸಿರುವ ಅಪೋಲೊ ಆಸ್ಪತ್ರೆಯ ಆಡಳಿತವು, ಐಜಿ(ಗುಪ್ತಚರ) ಕೆಎಸ್ ಸತ್ಯಮೂರ್ತಿ ಸಹಿತ ನಾಲ್ವರು ಪೊಲೀಸ್ ಅಧಿಕಾರಿಗಳಾಗಿರುವ ಜಯಲಲಿತಾ ಅವರನ್ನು ಕೋಣೆಯಿಂದ ಹೊರಗೆ ಹಾಗೂ ಒಳಗೆ ಕೊಂಡೊಯ್ಯುವಾಗ ಸಿಸಿಟಿವಿ ಆಫ್ ಮಾಡಬೇಕೆಂದು ಆದೇಶಿಸಿದ್ದರು ಎಂದು ಹೇಳಿದೆ.
2016ರ ವೇಳೆ ಇಲ್ಲಿಗೆ ಜಯಲಲಿತಾ ಅವರನ್ನು ಚಿಕಿತ್ಸೆಗಾಗಿ ದಾಖಲುಗೊಳಿಸಿದ ಸಮಯದ ಸಿಸಿಟಿವಿ ದೃಶ್ಯಾವಳಿಗಳು ನಾಪತ್ತೆಯಾಗಿದ್ದವು. ಇದರಿಂದ ಅಪೋಲೊ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
75 ದಿನಗಳ ಕಾಲ ಆಸ್ಪತ್ರೆಯಲ್ಲಿ ಜಯಲಲಿತಾ ಅವರು 2016ರ ಡಿಸೆಂಬರ್ 5ರಂದು ನಿಧನರಾಗಿದ್ದರು. ಸಾವಿನ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರವು ಆಯೋಗವನ್ನು ರಚಿಸಿದೆ.