ರಾಮನಾಥಪುರಂ: ಕಾಂಗ್ರೆಸ್, ಕಮ್ಯೂನಿಸ್ಟರು ಮತ್ತು ಮುಸ್ಲಿಂ ಲೀಗ್ ಶಬರಿಮಲೆ ವಿಚಾರದಲ್ಲಿ ಅಪಾಯಕಾರಿ ಆಟವಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಶನಿವಾರ ಇಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಅವರು ನಂಬಿಕೆ ಮತ್ತು ಭಾವನೆಗಳ ಬುಡಕ್ಕೆ ಹೊಡೆತ ನೀಡಿರುವರು. ಬಿಜೆಪಿ ಇರುವ ತನಕ ಯಾರೂ ನಮ್ಮ ನಂಬಿಕೆ ಮತ್ತು ಸಂಪ್ರದಾಯದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ ಎಂದರು.
ಸರ್ಕಾರದ ಹಲವಾರು ಪ್ರಯತ್ನ ಮತ್ತು ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆಸ್ ಅಡ್ಡಗಾಲು ಹಾಕಿದೆ. ತ್ರಿವಳಿ ತಲಾಕ್ ನ್ನು ಕೊನೆಗೊಳಿಸಲು ನಾವು ಕಾಯ್ದೆ ತಂದೆವು. ಆದರೆ ಕಾಂಗ್ರೆಸ್, ಡಿಎಂಕೆ ಮತ್ತು ಮುಸ್ಲಿಂ ಲೀಗ್ ಇದನ್ನು ವಿರೋಧಿಸಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದ ಮೋದಿ, ನೀವು ದೆಹಲಿಗೆ ಹೋದರೆ ಅಲ್ಲಿ ಒಂದು ಕುಟುಂಬಕ್ಕೆ ಸಂಬಂಧಿಸಿದ ಸ್ಮಾರಕಗಳನ್ನು ಕಾಣುವಿರಿ. ದೇಶಕ್ಕಾಗಿ ಆ ಕುಟುಂಬ ಮಾತ್ರ ದೇಣಿಗೆ ನೀಡಿದೆಯಾ? ಮಾಜಿ ರಾಷ್ಟ್ರಪತಿಗಳನ್ನು ಅವರು ಯಾಕೆ ಹೆಸರಿಸುತ್ತಿಲ್ಲ ಎಂದರು.