ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಇದ್ದ ಪ್ರತಿ ಮಗುವಿನ ಶಿಕ್ಷಣಕ್ಕೆ ಪ್ರತಿ ತಿಂಗಳು ₹ 2,000 ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ.
ಜಿಲ್ಲಾ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಇಂದಿಗೂ ಮಕ್ಕಳು ಇರುವುದರ ಬಗ್ಗೆ ವರದಿಯಾಗಿದ್ದು, ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರಗಳ ಕರ್ತವ್ಯವಾಗಿದೆ. ಈ ಮಕ್ಕಳಿಗಾಗಿ ಆನ್ಲೈನ್ ತರಗತಿಗಳನ್ನು ನಡೆಸುವ ಸಲುವಾಗಿ ಪಾಲನಾ ಕೇಂದ್ರಗಳಿಗೆ ಪುಸ್ತಕ, ಸ್ಠೇಷನರಿ ಸಾಮಗ್ರಿ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು 30 ದಿನಗಳ ಒಳಗಾಗಿ ಒದಗಿಸುವಂತೆಯೂ ಸುಪ್ರೀಂಕೋರ್ಟ್ ರಾಜ್ಯಸರ್ಕಾರಗಳಿಗೆ ನಿರ್ದೇಶನ ನೀಡಿದೆ.
‘ಮಕ್ಕಳ ರಕ್ಷಣೆ ಹಾಗೂ ಅವರ ಶಿಕ್ಷಣಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆಯೇ ಎಂಬುದನ್ನು ಮಕ್ಕಳ ಹಕ್ಕುಗಳ ಆಯೋಗ ಖಾತ್ರಿಪಡಿಸಿಕೊಳ್ಳಬೇಕು’ ಎಂದೂ ನ್ಯಾಯಪೀಠ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್, ಹೇಮಂತ್ ಗುಪ್ತ ಹಾಗೂ ಅಜಯ್ ರಸ್ತೋಗಿ ಒಳಗೊಂಡಿರುವ ನ್ಯಾಯಪೀಠ ಈ ವಿಷಯಕ್ಕೆ ಸಂಬಂಧಿಸಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅದರ ವಿಚಾರಣೆಯ ವೇಳೆಗೆ ಈ ನಿರ್ದೇಶನ ಕೈಗೊಳ್ಳಲಾಗಿದೆ.