ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸ್ಪಷ್ಟ ಪಡಿಸಿದ್ದಾರೆ.
ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಈ ಹೊಸ ಕಾಯ್ದೆ ರೈತರಿಗೆ ಸಹಕಾರಿಯಾಗಿವೆ. ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಇಂತಹ ಕಾಯ್ದೆಗಳು ಜಾರಿಯಾಗಬೇಕು ಎಂದು ಈ ಹಿಂದೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದವು ಎಂದು ಹೇಳಿದ್ದಾರೆ.
ಗುಜರಾತ್ನ ಧೋರ್ಡೊದಲ್ಲಿ ಈ ಬಗ್ಗೆ ಮಾತನಾಡಿ ‘ಈಗಿನ ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ಇವೇ ಕಾನೂನುಗಳನ್ನು ಜಾರಿಗೆ ತರಲು ಬಯಸಿದ್ದವು. ಆದರೆ, ನಿರ್ಧಾರ ಕೈಗೊಳ್ಳಲು ಅವರಿಗೆ ಆಗಿರಲಿಲ್ಲ. ಈಗ, ಜಮೀನುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ರೈತರ ದಾರಿ ತಪ್ಪಿಸಿ ಅಪಪ್ರಚಾರ ಮಾಡುತ್ತಿವೆ ಎಂದಿದ್ದಾರೆ.
ಈ ಕಾಯ್ದೆ ಇಂದ ರೈತರ ಜಮೀನನ್ನು ವಶಪಡಿಸಿಕೊಳ್ಳುತ್ತಾರೆ ಎಂಬ ಹೇಳಿಕೆಗೆ ಟಾಂಗ್ ನೀಡಿರುವ ಮೋದಿ, ನೀವು ಹಾಲು ಕೊಡುತ್ತೀರಿ ಎಂದ ಮಾತ್ರಕ್ಕೆ ಡೇರಿ ಮಾಲೀಕರು ನಿಮ್ಮ ಹಸುಗಳನ್ನು ವಶಪಡಿಸಿಕೊಳ್ಳುತ್ತಾರೆಯೇ’ ಎಂದು ಮರು ಪ್ರಶ್ನಿಸಿದರು.
ಚಳಿಗಾಲದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಧೋರ್ಡೊದಲ್ಲಿ ರೈತರಿಗಾಗಿ ನಮ್ಮ ಸರ್ಕಾರ ದಿನದ 24 ಗಂಟೆಯ ಕೆಲಸ ಮಾಡಲು ಸಿದ್ಧವಿದೆ ಎಂದು ಹೇಳಿದರು.
ಈ ಮಧ್ಯೆ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ‘ಹೊಸ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಕೊಳಿಸಿ, ಪ್ರತಿಭಟನಾನಿರತ ರೈತರ ಜತೆಗೆ ಒಪ್ಪಂದ ಮಾಡಿಕೊಂಡ ಬಳಿಕ ಹೊಸ ಮಸೂದೆಯನ್ನು ಮಂಡಿಸಿ’ ಎಂದು ಸರ್ಕಾರಕ್ಕೆ ಸಲಹೆಯನ್ನು ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ ಮಂಗಳವಾರ ಎರೆಡು ಪ್ರತ್ಯೇಕ ಪ್ರಕರಣಗಳಲ್ಲಿ ದೆಹಲಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ವೇಳೆ ಹರಿಯಾಣದ ಪಾತಿಯಾಲದಲ್ಲಿ ಇಬ್ಬರು ರೈತರು, ಮನಾಲಿಯಲ್ಲಿ ಇಬ್ಬರು ರೈತರು ಉಸಿರು ಚೆಲ್ಲಿದ್ದಾರೆ. ಪ್ರಕರಣದಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ.