ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಾದ ನವದೆಹಲಿ ಹಾಗೂ ಹರಿಯಾಣ ಗಡಿ ಪ್ರದೇಶ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಹಲವಾರು ರೈತರು, ರೈತ ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತಿವೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆಗೆ ಹಲವು ಸುತ್ತಿನ ಮಾತುಕತೆಗಳನ್ನು ರೈತ ಸಂಘಟನೆಗಳು ನಡೆಸಿದರೂ ಪ್ರಯೋಜನ ಆಗಿರಲಿಲ್ಲ. ಆದರೆ ಸರ್ಕಾರ ಇದೀಗ ಮತ್ತೆ ಮಾತುಕತೆಗೆ ರೈತರನ್ನು ಕರೆಯಲು ಸಿದ್ಧತೆ ನಡೆಸಿದ್ದು ದಿನಾಂಕವನ್ನು ನಿಗದಿ ಗೊಳಿಸುವಂತೆ ರೈತ ಸಂಘಟನೆಗಳನ್ನ ಕೋರಿದೆ.
ಕೇಂದ್ರೀಯ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರು 40 ರೈತ ಸಂಘಟನೆಯ ಮುಖಂಡರಿಗೆ ಪತ್ರವನ್ನು ಬರೆದಿದ್ದು, ಹೊಸ ಕೃಷಿ ಕಾನೂನುಗಳಲ್ಲಿ ಯಾವೆಲ್ಲಾ ತಿದ್ದುಪಡಿಯನ್ನು ತರಬೇಕು ಎಂದು ತಿಳಿಸುವಂತೆ ಮನವಿ ಮಾಡಿದೆ. ರೈತರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರವು ‘ಮುಕ್ತ ಮನಸ್ಸಿ’ನ ಮಾತುಕತೆಗೆ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ ಎಂದಿದ್ದಾರೆ. ಆದರೆ ಈ ಹಿಂದೆ 5 ಸುತ್ತಿನ ಮಾತುಕತೆ ವಿಫಲವಾಗಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಸಮಸ್ಯೆ ಇತ್ಯರ್ಥಗೊಳಿಸಲು ಮುಂದಿನ ಸಭೆಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಸಲು ಸರ್ಕಾರ ಉದ್ದೇಶಿಸಿದೆ.