ನವದೆಹಲಿ: ಕೇಂದ್ರ ಸರ್ಕಾರದ “ಕಪ್ಪು ಕಾನೂನುಗಳನ್ನು” ರದ್ದುಪಡಿಸುವವರೆಗೆ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸದಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಮನವಿ ಮಾಡುವಂತೆ ಬ್ರಿಟಿಷ್-ಪಂಜಾಬಿ ನಾಯಕರನ್ನು ಕೋರಿದ್ದೇವೆ ಎಂದು ಕೃಷಿ ಮುಖಂಡರು ಮಂಗಳವಾರ ಹೇಳಿದ್ದಾರೆ.
ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕವನ್ನು ನಿಗದಿಪಡಿಸುವಂತೆ ಕೇಳಿದ ಸರ್ಕಾರದ ಪತ್ರಕ್ಕೆ ಪ್ರತಿಕ್ರಿಯೆ ನೀಡಲು ನಾಯಕರು ಇಂದಿನವರೆಗೆ ತಮ್ಮ ಸಭೆಯನ್ನು ಮುಂದೂಡಿದ್ದಾರೆ. ಅಲ್ಲದೆ “ಅಂಬಾನಿ ಮತ್ತು ಅದಾನಿ ನಡೆಸುವ ಎಲ್ಲಾ ಮಳಿಗೆಗಳನ್ನು ಬಹಿಷ್ಕರಿಸಿ” ಎಂದು ಮನವಿ ಕೂಡಾ ಮಾಡಿದರು.
ಸಿಂಗು ಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಕು (ಲಖೋವಾಲ್) ರಾಜ್ಯ ಕನ್ವೀನರ್ ಹರೇಂದರ್ ಸಿಂಗ್ ಲಖೋವಾಲ್ “ರೈತರ ಬೇಡಿಕೆಗಳು ಈಡೇರುವ ತನಕ ಭಾರತಕ್ಕೆ ಬರದಂತೆ ನಾವು ಬ್ರಿಟಿಷ್ ಪ್ರಧಾನಿಯನ್ನು ಕೋರುತ್ತಿದ್ದೇವೆ. ಈಗ ಇಂಗ್ಲೆಂಡ್ ರಾಜಕೀಯದಲ್ಲಿದ್ದ ಮತ್ತು ಅಲ್ಲಿ ಚುನಾವಣೆಯಲ್ಲಿ ಗೆದ್ದಿರುವ ಪಂಜಾಬ್ ನಾಯಕರ ಮೂಲಕ ಈ ಮನವಿ ಮಾಡಿದ್ದೇವೆ” ಎಂದರು.
ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಜನವರಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಜಾನ್ಸನ್ ಮುಖ್ಯ ಅತಿಥಿಯಾಗಿ ಭಾಗವಹಿಸುವುದಾಗಿ ಘೋಷಿಸಿದರು. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜೊತೆಗೆ ರೈತ ಪ್ರತಿಭಟನೆಯಿಂದ ಉಂಟಾಗುವ ಪರಿಸ್ಥಿತಿಯನ್ನು “ಚರ್ಚಿಸಿದ್ದೇನೆ” ಎಂದು ರಾಬ್ ಹೇಳಿದ್ದಾರೆ.