ಲಂಡನ್: ಹೊಸ ಮಾದರಿಯ ಕೊರೊನಾ ವೈರಸ್ನ ಸೋಂಕು ಬ್ರಿಟನ್ನಲ್ಲಿ ಮತ್ತೆ ಕಾಣಿಸಿಕೊಂಡಿದೆ ಎಂದು ಬ್ರಿಟೀಷ್ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ ಹೇಳಿದ್ದಾರೆ.
ಇಂಗ್ಲೆಂಡ್ ನಿಂದ ವ್ಯಕ್ತಿಗಳು ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ್ದರು ಇವರ ಸಂಪರ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳಲ್ಲಿ ಇದೀಗ ಸೋಂಕು ಕಾಣಿಸಿಕೊಂಡಿದೆ. ಹೊಸ ಸ್ವರೂಪದ ಸೋಂಕು ಪತ್ತೆಯಾಗುತ್ತಿದ್ದಂತೆ ದಕ್ಷಿಣ ಆಫ್ರಿಕಾದಿಂದ ಬ್ರಿಟನ್ ಗೆ ಪ್ರಯಾಣ ಬೆಳೆಸುವವರಿಗೆ ನಿರ್ಬಂಧ ಹೇರಲಾಗಿದೆ.
ಇಂಗ್ಲೆಂಡ್ ಕಾಲಮಾನದ ಪ್ರಕಾರ ಬೆಳಿಗ್ಗೆ 9ರಿಂದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಕಳೆದ ಹದಿನೈದು ದಿನಗಳಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿರುವವರು ಹಾಗೂ ಪ್ರಯಾಣಿಸಿದವರೊಂದಿಗೆ ಸಂಪರ್ಕದಲ್ಲಿ ಇದ್ದವರು ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ.
ಹೊಸ ಸ್ವರೂಪದ ಸೋಂಕು ದಕ್ಷಿಣ ಆಫ್ರಿಕಾದಲ್ಲಿಯೂ ಪ್ರಕರಣಗಳ ಸಂಖ್ಯೆಗೆ ಕಾರಣವಾಗಿರಬಹುದೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಅಲ್ಲಿನ ಆರೋಗ್ಯ ಸಚಿವ ಝ್ವೆಲಿ ಮೆಖೈಜ್ ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಆಪ್ರಿಕಾದಲ್ಲಿ ಯುವ ಜನತೆ ಹಾಗೂ ಹಿಂದೆ ಆರೋಗ್ಯವಾಗಿದ್ದ ಜನರೂ ಸಹ ಅಸ್ವಸ್ಥರಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
‘ಹೊಸ ಸ್ವರೂಪದ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದೆ. ಮಾತ್ರವಲ್ಲದೆ ದೇಶದಲ್ಲಿ ಹಲವು ಭಾಗಗಳಲ್ಲಿ ವ್ಯಾಪಿಸಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಎಂದು ದಕ್ಷಿಣ ಆಫ್ರಿಕಾದ ಸಂಶೋಧಕರು ತಿಳಿಸಿದ್ದಾರೆ.
ಬ್ರಿಟನ್ನಲ್ಲಿ ಮಂಗಳವಾರ ಮೊದಲ ಬಾರಿಗೆ ಹೊಸ ಸ್ವರೂಪದ ಸೋಂಕು ಪತ್ತೆಯಾಗಿದ್ದು, ವ್ಯಾಪಕವಾಗಿ ಹರಡುತ್ತಿದೆ.
ಇತ್ತೀಚೆಗೆ ಹೊಸದಾಗಿ ಕಾಣಿಸಿಕೊಂಡಿದ್ದ ಸೋಂಕಿನ ಸ್ವರೂಪದೊಂದಿಗೆ ಸಾಮ್ಯತೆ ಹೊಂದಿದೆ. ಎರಡೂ ಸ್ವರೂಪದ ವೈರಸ್ಗಳಲ್ಲಿ ಮನುಷ್ಯರ ದೇಹದ ಜೀವಕೋಶಗಳಿಗೆ ಸೋಂಕು ತಗುಲಿಸುವ ‘ಎನ್501ವೈ’ ರೂಪಾಂತರ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಹಬ್ಬದ ಸಮಯದಲ್ಲಿ ದಕ್ಷಿಣ ಆಫ್ರಿಕಾ ಸರ್ಕಾರ ನಿರ್ಬಂಧಗಳನ್ನು ವಿಧಿಸಿದ್ದು, ಬೀಚ್ಗಳನ್ನು ಹಾಗೂ ಪ್ರಸಿದ್ಧ ಗಾರ್ಡನ್ ರೂಟ್ಗಳನ್ನು ಮುಚ್ಚಲಾಗಿದೆ. ಈವರೆಗೂ ದಕ್ಷಿಣ ಆಫ್ರಿಕಾದಲ್ಲಿ 9.54 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ ಹಾಗೂ 25 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.