ಚೆನ್ನೈ: ಮುಂದಿನ ಕೆಲವೇ ದಿನಗಳಲ್ಲಿ ಕೋವಿಡ್-19 ಲಸಿಕೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾಹಿತಿ ತಿಳಿಸಿದ್ದಾರೆ.
ತಮಿಳುನಾಡಿಗೆ ಭೇಟಿ ನೀಡಿರುವ ಆರೋಗ್ಯ ಸಚಿವರು ಎರಡನೇ ಹಂತದ ಲಸಿಕೆ ವಿತರಣೆ ತಾಲೀಮು (ಡ್ರೈ ರನ್) ನಡೆಯುತ್ತಿದೆ ಎಂದರು.
ಅತ್ಯಂತ ಕಡಿಮೆ ಅವಧಿಯಲ್ಲಿ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಭಾರತವು ಉತ್ತಮ ಸಾಧನೆ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ನಾವು ಈ ಲಸಿಕೆಗಳನ್ನು ದೇಶವಾಸಿಗಳಿಗೆ ನೀಡಲಿದ್ದೇವೆ, ಮೊದಲು ನಮ್ಮ ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಮುಂಚೂಣಿಯ ಸೇನಾನಿಗಳಿಗೆ ನೀಡಲಿದ್ದೇವೆ ಎಂದು ಹರ್ಷವರ್ಧನ್ ತಿಳಿಸಿದರು.
ಕೋವಿಡ್-19 ಲಸಿಕೆ ಹಂಚಿಕೆ ಸುಗಮವಾಗಿ ಸಾಗಲು ಮತ್ತು ಅಗತ್ಯ ಬೇಡಿಕೆದಾರರಿಗೆ ತಲುಪಲು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್ಜಿಒಗಳ ಸಹಾಯಕ್ಕೆ ವಿನಂತಿ ಮಾಡಿಕೊಂಡಿದ್ದೇವೆ ಎಂದು ಈ ಸಮಯದಲ್ಲಿ ತಿಳಿಸಿದ್ದಾರೆ.
ಶುಕ್ರವಾರದಂದು ದೇಶದ 33 ರಾಜ್ಯಗಳ 736 ಜಿಲ್ಲೆಗಳಲ್ಲಿ ಕೋವಿಡ್-19 ಲಸಿಕೆ ಹಂಚಿಕೆ ಮಾಡಲು ಸಿದ್ಧತೆ ನಡೆದಿದೆ. ಹಾಗಾಗಿ ತಮಿಳುನಾಡಿನ ರಾಜೀವ್ ಗಾಂಧಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪೂರ್ವಾಭ್ಯಾಸವನ್ನು ಪರಿಶೀಲಿಸಿದರು.