ನವದೆಹಲಿ: ಇದೀಗ ಎಲ್ಲೆಡೆ ಸುದ್ದಿಯಲ್ಲಿರುವ ವಾಟ್ಸ್ಆಯಪ್ ಹೊಸ ಪ್ರೈವರಿ ಪಾಲಿಸಿಯನ್ನು ಜಾರಿಗೊಳಿಸುವ ವಿಷಯವಾಗಿ ಹಾಗೂ ಅದಕ್ಕೆ ನಿರ್ಬಂಧ ಹೇರಿ ಅಥವಾ ವಾಟ್ಸ್ ಆ್ಯಪ್ ಮತ್ತು ಫೇಸ್ಬುಕ್ ಎರಡನ್ನೂ ಬ್ಯಾನ್ ಮಾಡಿ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(CIAT) ಇಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ರವಿಶಂಕರ್ ಅವರನ್ನ ಭೇಟಿಮಾಡಿ ಮನವಿ ಸಲ್ಲಿಸಿದೆ.
ಫೇಸ್ಬುಕ್ ದೇಶದಲ್ಲಿ 20 ಕೋಟಿಗೂ ಹೆಚ್ಚು ಬಳಕೆದಾರರನ್ನ ಹೊಂದಿದ್ದು, ಇವರೆಲ್ಲರ ಡೇಟಾ ಬಳಸಿಕೊಂಡರೆ ಇದರಿಂದ ಆರ್ಥಿಕತೆ ಹಾಗೂ ದೇಶದ ಭದ್ರತೆಗೆ ಆಪತ್ತು ಎದುರಾಗಲಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಹೇಳಿದೆ.
ಅಷ್ಟೇ ಅಲ್ಲದೆ ಒಕ್ಕೂಟ ಸಲ್ಲಿಸಿದ ಮನವಿಯಲ್ಲಿ ವಾಟ್ಸ್ ಆ್ಯಪ್ ತನ್ನ ಹೊಸ ಪ್ರೈವಸಿ ಪಾಲಿಸಿ ಮೂಲಕ ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿ, ಹಣ ವರ್ಗಾವಣೆ ಮಾಹಿತಿ, ಸಂಪರ್ಕಗಳು, ಲೊಕೇಷನ್ ಮತ್ತು ಇತರೆ ಸೂಕ್ಷ್ಮ ಮಾಹಿತಿಗಳನ್ನ ಸ್ವಾಧೀನ ಪಡಿಸಿಕೊಳ್ಳುತ್ತದೆ ಹಾಗೂ ಅದನ್ನ ತನಗಿಷ್ಟ ಬಂದಂತೆ ಬಳಸಿಕೊಳ್ಳಲು ಮುಂದಾಗಿದೆ ಎಂದು ಉಲ್ಲೇಖಿಸಿದ್ದಾರೆ.