News Kannada
Tuesday, March 28 2023

ದೇಶ-ವಿದೇಶ

SUNDAY STORY ಬೆಂಗಳೂರಿಗೆ ಕಾಫಿಯನ್ನು ಪರಿಚಯಿಸಿದ್ದು ಯಾರು ಗೊತ್ತೇ ?

Photo Credit :

SUNDAY STORY             ಬೆಂಗಳೂರಿಗೆ ಕಾಫಿಯನ್ನು ಪರಿಚಯಿಸಿದ್ದು ಯಾರು ಗೊತ್ತೇ ?

ಬೆಂಗಳೂರಿಗೆ ಕಾಫಿಯನ್ನು ಪರಿಚಯಿಸಿದ್ದು ಯಾರು ಗೊತ್ತೇ ?

    ವಾಣಿಜ್ಯ ಬೆಳೆ ಕಾಫಿ ತನ್ನ ಅಪೂರ್ವ  ಸುವಾಸನೆ  ಹಾಗೂ ರುಚಿಯಿಂದಾಗಿ ವಿಶ್ವಾದ್ಯಂತ  ಹೆಸರುವಾಸಿ ಆಗಿದೆ. ಇಂದು ಕೋಟ್ಯಾಂತರ ಜನರಿಗೆ ದಿನ ಬೆಳಗಾಗುತಿದ್ದಂತೆ  ಒಂದು ಕಪ್ ಕಾಫಿ ಕುಡಿಯದಿದ್ದರೆ  ದಿನವು ಆರಂಬವಾಗುವುದೇ ಇಲ್ಲ.  ಲಕ್ಷಾಂತರ ಜನರು ಈ ಪಾನೀಯಕ್ಕೆ ದಾಸರೂ ಅಗಿ ಬಿಟ್ಟಿದ್ದಾರೆ. ನಿತ್ಯ ಎರಡು ಅಥವಾ ನಾಲ್ಕು ಕಪ್  ಮತ್ತು ಅದಕ್ಕಿಂತಲೂ ಜಾಸ್ತಿ ಕುಡಿಯುವವರೂ  ಇದ್ದಾರೆ.

ಇಂದು ದೇಶದ ಕಾಫಿ ಉತ್ಪಾದನೆಯಲ್ಲಿ  ಗಣನೀಯ ಪಾಲು ಹೊಂದಿರುವುದು ಕರ್ನಾಟಕ ಮಾತ್ರ. ನಮ್ಮ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುವ ಕಾಫಿ   ಗುಣಮಟ್ಟ ಹಅಗೂ ರುಚಿಯಲ್ಲಿ ಉತ್ಕೃಷ್ಟ ದರ್ಜೆಯದ್ದಾಗಿದೆ.      ದೇಶದ ಒಟ್ಟು ಕಾಫಿ ಉತ್ಪಾದನೆಯಾದ  ಸುಮಾರು 3.6 ಲಕ್ಷ ಟನ್ ಗಳಲ್ಲಿ  ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೇ ಶೇಕಡಾ 70 ರಷ್ಟು ಪಾಲು ಇದ್ದರೆ   ಇದರಲ್ಲಿ  ಪುಟ್ಟ ಜಿಲ್ಲೆ ಕೊಡಗು ದೇಶದ ಕಾಫಿ ಉತ್ಪಾದನೆಯಲ್ಲಿ  ಶೇಕಡಾ 30 ಕ್ಕೂ ಅಧಿಕ ಪಾಲು ಹೊಂದಿದೆ . ಇದು ಜಿಲ್ಲೆಯ ಹೆಗ್ಗಳಿಕೆ . ಕಾಪಿಯ ಬೀಜವು ದೇಶಕ್ಕೆ ಬಂದಿದ್ದು  ಅರಬ್ ವರ್ತಕರಿಂದ ಎಂದು ಹೇಳಲಾಗಿದ್ದು  1670 ನೇ ಇಸವಿಯಲ್ಲಿ  ಚಿಕ್ಕಮಗಳೂರು ಸಮೀಪದ ಬಾಬಾ ಬುಡನ್ ಗಿರಿಯಲ್ಲಿ ದೇಶದಲ್ಲೇ ಮೊದಲ ಕಾಫಿ ಬೆಳೆ ಬೆಳೆಯಲಾಯಿತು.  ಈ ಕಾಫಿಯ ಘಮ ಬೆಂಗಳೂರಿಗೆ ಪರಿಚಯಿಸಿದ ಖ್ಯಾತಿ ಓರ್ವ ಮಹಿಳೆಯದಾಗಿದ್ದು ಇದರ ಹಿಂದೆ ರೋಚಕ ಯಶೋಗಾಥೆಯೊಂದು  ಇದೆ ಎಂದು  ಬಹಳಷ್ಟು ಬೆಂಗಳೂರಿಗರಿಗೆ ಇನ್ನೂ ಗೊತ್ತಿಲ್ಲ. 

ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿ  ಅಲ್ಲೆ ಹುರಿದು ಪುಡಿ ಮಾಡುವ ಮಿಲ್ ನ್ನು ಸ್ಥಾಪಿಸಿ  ಮನೆ ಮನೆಗಳಿಗೂ ಕಾಫಿ ಮಾರಾಟ ಮಾಡಿದ  ಮಹಿಳಾ ಉದ್ಯಮಿಯೇ ದೊಡ್ಡ ಮನೆ  ಸಾಕಮ್ಮ. ಇವರು 1880 ನೇ ಇಸವಿಯಲ್ಲಿ  ತುಮಕೂರು ಜಿಲ್ಲೆಯ ಬಿದರೆ ಎಂಬ ಊರಿನಲ್ಲಿ ಜನಿಸಿದ  ಸಾಕಮ್ಮ  ಅವರು   ನೇಕಾರಿಕೆಯೇ  ಕುಲ ಕಸುಬಾದ ಕುರುಹಿನಶೆಟ್ಟಿ ಜನಾಂಗಕ್ಕೆ ಸೇರಿದವರು.  ಅವರ ಕುಟುಂಬ ಉತ್ತಮ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ವಲಸೆ   ಬಂದಿತು.  ಚಿಕ್ಕ ಬಾಲಕಿಯಾಗಿದ್ದಾಗಲೇ  ಕಲಿಕೆಯಲ್ಲಿ ಆಸಕ್ತಿ ಮತ್ತು ಕುತೂಹಲ ಹೊಂದಿದ್ದ   ಸಾಕಮ್ಮ ಅವರ ಆಸೆಗೆ ಪೋಷಕರೂ ಸಕಾರಾತ್ಮಕವಾಗೇ ಸ್ಪಂದಿಸಿದರು. ಇದರಿಂದಾಗಿ ಸಾಕಮ್ಮ  ಅಂದಿನ ಕಾಲದಲ್ಲೇ ಮಾಧ್ಯಮಿಕ ಪಡೆದ ಕೆಲವೇ ಬಾಲಕಿಯರಲ್ಲಿ ಒಬ್ಬರಾಗಿದ್ದರು. ಬಹುಶಃ ಕುಟುಂಬದ ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಸಾಕಮ್ಮ ಅವರು ತಮ್ಮ ಹದಿನಾರನೇ ವಯಸ್ಸಿನಲ್ಲೇ  ಅನಿವಾರ್ಯವಾಗಿ  ತಮಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯರಾಗಿದ್ದ  ಕೊಡಗಿನ ಸೋಮವಾರಪೇಟೆಯಲ್ಲಿ   ಅಗರ್ಭ ಶ್ರೀಮಂತರೇ ಆಗಿದ್ದ ದೊಡ್ಡ ಮನೆ ಚಿಕ್ಕ ಬಸಪ್ಪ ಶೆಟ್ಟಿ ಅವರನ್ನು  ವರಿಸಬೇಕಾಯಿತು. ಆ ಸಮಯದಲ್ಲೇ ಚಿಕ್ಕ ಬಸಪ್ಪ ಅವರಿಗೆ ಎರಡು ಮದುವೆ ಆಗಿದ್ದು  ಮಕ್ಕಳಿರಲಿಲ್ಲ. ಮದುವೆ ಆದ ಎರಡೇ ವರ್ಷಗಳಲ್ಲಿ ಚಿಕ್ಕ ಬಸಪ್ಪ ಅವರು ತೀರಿಕೊಂಡರು.

See also  ಶಿವಸೇನಾ ಬಿಜೆಪಿಯೊಂದಿಗೆ ಹೋಗಲ್ಲ: ಸಂಜಯ್ ರಾವುತ್

ಅಂದಿನ ಬ್ರಿಟಿಷ್ ಕಾಲದಲ್ಲೇ ಸಾಕಮ್ಮ ಕುಟುಂಬಕ್ಕೆ ನೂರಾರು ಎಕರೆ ಕಾಫಿ ತೋಟವಿತ್ತು. ಈ ಬೃಹತ್ ಕಾಫಿ ತೋಟದ ಜತೆಗೇ  ನೂರಾರು ಆಳು ಕಾಳುಗಳ ನಿರ್ವಹಣೆ ಇವರ ಹೆಗಲಿಗೇ ಬಿತ್ತು. ಏಕೆಂದರೆ ಇವರ ಇಬ್ಬರು ಸವತಿಯರೂ  ಹೆಚ್ಚಿಗೆ ಓದಿದವರಾಗಿರಲಿಲ್ಲ.  ಅದರೆ ಚತುರೆ ಅಗಿದ್ದ ಸಾಕಮ್ಮ ಬಹಳ ಬೇಗನೇ ಕಾಫಿ ತೋಟದ ನಿರ್ವಹಣೆಯನ್ನು ಕಲಿತಿದ್ದಲ್ಲದೆ  ತೋಟಗಳು ಹೆಚ್ಚು ಫಸಲನ್ನು ನೀಡುವಂತೆ ಗಿಡಗಳ ಆರೈಕೆ ಮಾಡಿ ಅದರಲ್ಲೂ ಸೈ ಅನ್ನಿಸಿಕೊಂಡರು. ಅಷ್ಟರಲ್ಲಿ  ಇಬ್ಬರು ಸವತಿಯರೂ ಕಾಲವಾಗಿದ್ದರು. ಮಹತ್ವಾಕಾಂಕ್ಷಿ ಆಗಿದ್ದ  ಸಾಕಮ್ಮ ಅವರು ಬರೇ  ಕಾಫಿಯ ಉತ್ಪಾದನೆ ಹೆಚ್ಚಿಸಿದ್ದೆ ಸಾಕೆಂದು ಸುಮ್ಮನೇ ಕೂರಲಿಲ್ಲ. ಬದಲಿಗೆ ಕಾಫಿಯ ಬಳಕೆ ಹೆಚ್ಚಿಸಿ ಕಾಫಿಗೆ ಉತ್ತಮ ಮಾರುಕಟ್ಟೆ ದೊರೆಯುವಂತೆ ಮಾಡಲೂ ಪ್ರಯತ್ನಿಸಿದರು. ಆ ಪ್ರಯತ್ನದ ಫಲವಾಗಿಯೇ ಬೆಂಗಳೂರಿನ  ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ  1920 ನೇ ಇಸವಿಯಲ್ಲಿ ಮೊತ್ತ ಮೊದಲ  ಕಾಫಿ ಕ್ಯೂರಿಂಗ್ ಹಾಗೂ ಪೌಡರಿಂಗ್ ಘಟಕವನ್ನು ಸ್ಥಾಪಿಸಿದರು. ಅಂದಿನ ಕಾಲದಲ್ಲಿ  ಭಾರತದಲ್ಲಿ ಯಂತ್ರೋಪಕರಣಗಳು ತಯಾರಿಸದಿದ್ದ ಕಾರಣದಿಂದಾಗಿ ಇಂಗ್ಲೆಂಡ್ ನಿಂದ ಯಂತ್ರಗಳನ್ನು ತರಿಸಲಾಯಿತು ಎನ್ನಲಾಗಿದೆ.

ಸಾಕಮ್ಮ ಅವರ ಕಾಫಿ ಪುಡಿ ಬಹು ಬೇಗನೇ ಬೆಂಗಳೂರಿನಲ್ಲಿ ಜನಪ್ರಿಯವಾಯಿತಲ್ಲದೆ ಇದರಿಂದ ಕಾಫಿ ಪುಡಿ ಸಾಕಮ್ಮ ಎಂಬ ಹೆಸರೂ ಅವರಿಗೆ ಲಭಿಸಿತು !. ಇವರ ಘಟಕದಿಂದ ಕಾಫಿ ಪುಡಿ ಖರೀದಿಸಿ ಅನೇಕರು ನಗರದ ವಿವಿದೆಡೆಗಳಲ್ಲಿ   ಕಾಫಿ ಮಾರಾಟ ಕೇಂದ್ರಗಳನ್ನು ತೆರೆದರು. ಕನ್ನಡದ ಜನಪ್ರಿಯ ಸಾಹಿತಿಗಳಾದ  ಮಾಸ್ತಿ ವೆಂಕಟೇಷ ಅಯ್ಯಂಗಾರ್ ಮತ್ತು ಡಿ ವಿ ಗುಂಡಪ್ಪ ಅವರು ತಮ್ಮ ಸಾಹಿತ್ಯ ರಚನೆಗಳಲ್ಲಿ  ಸಾಕಮ್ಮ ಅವರ ಕಾಫಿ ಯನ್ನೂ ಉಲ್ಲೇಖಿಸಿದ್ದರು ಎಂದರೆ ಕಾಫಿಯ ಜನಪ್ರಿಯತೆಯ ಮಟ್ಟ ನಮಗೆ ಅರಿವಾಗುತ್ತದೆ. ಶೀಘ್ರದಲ್ಲೇ, ಸಾಕಮ್ಮ ಕಾಫಿ ವರ್ಕ್ಸ್ ಬೆಂಗಳೂರಿನಲ್ಲಿ ಮನೆಯ ಹೆಸರಾಯಿತು.  ! ಓರ್ವ ಯಶಸ್ವಿ ಉದ್ಯಮಿಯಾಗಿ ಗುರ್ತಿಸಿಕೊಂಡ  ಸಾಕಮ್ಮ ಅವರನ್ನು  ಅಂದಿನ ಮೈಸೂರು ಸರ್ಕಾರ  ಕೈಗಾರಿಕಾ ಅಭಿವೃದ್ದಿ ಮಾಡಲು ಸಮಿತಿಯೊಂದನ್ನು ರಚಿಸಿ ಅದರಲ್ಲಿ ಅವರನ್ನು ಸೇರಿಸಿಕೊಂಡಿತು. ಇದೆಲ್ಲದರಿಂದ ಸಾಕಮ್ಮ ಬೆಂಗಳೂರಿನ ಗಣ್ಯ ವ್ಯಕ್ತಿಗಳಲ್ಲೊಬ್ಬರಾಗಿ ಹೊರಹೊಮ್ಮಿದರು. ನಂತರ ಸಾಕಮ್ಮ ಅವರು ಬ್ರಿಟಿಷರ ಪಾಲುದಾರಿಕೆಯೊಂದಿಗೆ ಕಾಫಿಯನ್ನು ಮಂಗಳೂರಿನ ಮೂಲಕ ಹಡಗಿನಲ್ಲಿ ಇಂಗ್ಲೆಂಡ್‌ ಗೆ ರಫ್ತು ಮಾಡಲೂ ತೊಡಗಿದರು.

ಆ ಸಮಯದಲ್ಲೇ  ಬಡ ಮಕ್ಕಳ ವಿದ್ಯಬ್ಯಾಸಕ್ಕೆ ಅನುಕೂಲವಾಗಲೆಂದು  ವಿಶ್ವೇಶ್ವರ ಪುರಂ ನಲ್ಲಿ ಸಾಕಮ್ಮ ಹಾಸ್ಟೆಲ್ ಒಂದನ್ನೂ ನಿರ್ಮಿಸಿದರು. ಇದು ಈಗ ಕುರುಹಿನಶೆಟ್ಟಿ  ಸಂಘದ ಕೇಂದ್ರ ಕಚೇರಿಯಾಗಿದೆ. ಇಲ್ಲೇ ಕಲ್ಯಾಣ ಮಂಟಪವೂ ಇದೆ. ಇದರ ಜತೆಗೇ ಹಲವಾರು ದಾನ ಧರ್ಮ ಕಾರ್ಯಗಳಿಗೂ ಇವರು ಮುಂದಾಗಿದ್ದು , ಇವರು  ಬಸವನಗುಡಿಯಲ್ಲಿ  ಕಾಫಿ ಕ್ಯೂರಿಂಗ್ ಘಟಕವನ್ನು ನಡೆಸುತ್ತಿದ್ದ ಪ್ರದೇಶವನ್ನು ಈಗಲೂ ಸಾಕಮ್ಮ ಗಾರ್ಡನ್ ಎಂದು ಕರೆಯಲಾಗುತ್ತದೆ.

ವ್ಯಾಪಾರ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯನ್ನು ಗುರುತಿಸಿ, ಮೈಸೂರು ಮಹಾರಾಜರಾದ ಶ್ರೀ ಕೃಷ್ಣ ರಾಜ ವಾಡಿಯಾರ್ Iಗಿ, ಸಾಕಮ್ಮ ಅವರಿಗೆ ‘ಲೋಕಸೇವ ಪಾರಾಯಣೆ ’  ಎಂಬ ಪ್ರತಿಷ್ಠಿತ ಬಿರುದನ್ನು ನೀಡಿ ಗೌರವಿಸಿದರು.  .ಮಹಿಳೆಯರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಸೀಮಿತ ಅವಕಾಶಗಳನ್ನು ಹೊಂದಿದ್ದ  ಆ ಕಾಲದಲ್ಲಿ  ಬ್ರಿಟಿಷರು ಅವರಿಗೆ  ‘ಕೈಸರ್-ಐ-ಹಿಂದ್’  ಪದಕವನ್ನು ನೀಡಿದರು.  ಅವರು 1928 ರಲ್ಲಿ ಹಿಂದಿನ ಮೈಸೂರು ಪ್ರತಿನಿಧಿ ಸಭೆಗೆ ನಾಮನಿರ್ದೇಶನಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗಗೂ  ಪಾತ್ರರಾಗಿದ್ದಾರೆ.  ಕಾಫಿಗೆ ದೇಶೀ ಮಾರುಕಟ್ಟೆ ಕಡಿಮೆ . ಈಗಲೂ ನಾವು ಬೆಳೆದ  ಶೇಕಡಾ 70 ರಷ್ಟು ಕಾಫಿ ವಿದೇಶಕ್ಕೆ ರಫ್ತಾಗುತ್ತಿದೆ. ಅಂದಿನ ಕಾಲದಲ್ಲಿಯೇ  ಸಾಕಮ್ಮ ಅವರು  ಜಿಲ್ಲೆಯ ಮೊದಲ ಮಹಿಳಾ ಉದ್ಯಮಿ ಅಷ್ಟೇ ಅಲ್ಲ ರಫ್ತುದಾರೆ ಎಂಬ ಖ್ಯಾತಿಗೂ ಪಾತ್ರವಾಗಿದ್ದರು ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ.

See also  ಹುಲಿ ದತ್ತು ಪಡೆದ ಹುಬ್ಬಳಿ ಟೈಗರ್ಸ್ ತಂಡ

ಸಾಕಮ್ಮ ಅವರ ಯಶೋಗಾಥೆ ನಮ್ಮ ಮಹಿಳಾ ಉದ್ಯಮಿಗಳಿಗೊಂದು ಸ್ಪೂರ್ತಿದಾಯಕ ಉದಾಹರಣೆ ಆಗಬಲ್ಲುದು. 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು