News Kannada
Saturday, December 03 2022

ದೇಶ-ವಿದೇಶ

ಲಾಕ್‌ ಡೌನ್‌ ಸಮಯದಲ್ಲಿ ಅನ್‌ಲೈನ್‌ ನಲ್ಲಿ ಉಗ್ರರ ನೇಮಕ

Photo Credit :

ಲಾಕ್‌ ಡೌನ್‌ ಸಮಯದಲ್ಲಿ ಅನ್‌ಲೈನ್‌ ನಲ್ಲಿ ಉಗ್ರರ ನೇಮಕ

ಕರೊನಾದಿಂದಾಗಿ ಇಡೀ ವಿಶ್ವ ಸ್ತಬ್ಧವಾಗಿರುವ ಸಂದರ್ಭದಲ್ಲಿ ಭಯೋತ್ಪಾದನಾ ಸಂಘಟನೆಗಳು ಆನ್​ಲೈನ್ ಮೂಲಕ ಹೊಸ ಸದಸ್ಯರ ನೇಮಕ ಪ್ರಕ್ರಿಯೆಯನ್ನು ಸದ್ದಿಲ್ಲದಂತೆ ಮುಂದುವರಿಸಿರುವ ಆಘಾತಕಾರಿ ಮಾಹಿತಿ ಬಯಲಾಗಿದೆ. ಮದ್ದುಗುಂಡಿನ ಸದ್ದು ನಿಲ್ಲಿಸಿ ಮೌನ ಕಾರ್ಯಾಚರಣೆ ಮೂಲಕವೇ ಉಗ್ರರು ಸಂಘಟನೆಯ ಶಕ್ತಿ ಬಲಪಡಿಸುತ್ತಿರುವ ಸಂಗತಿಯನ್ನು ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಆಯೋಜಿಸಿದ್ದ ಬ್ರಿಕ್ಸ್ ಸೆಮಿನಾರ್ ಹೊರಗೆಡವಿದೆ. ‘ಉಗ್ರರಿಂದ ಇಂಟರ್ನೆಟ್ ದುರ್ಬಳಕೆ’ ವಿಚಾರವಾಗಿ ನಡೆದ ಸೆಮಿನಾರ್​ನಲ್ಲಿ ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಭದ್ರತಾ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ನಡೆದ ವಿಚಾರ ವಿನಿಮಯದಲ್ಲಿ ಉಗ್ರರ ರಹಸ್ಯ ನೇಮಕಾತಿ ಪ್ರಕ್ರಿಯೆ ಜಾಡು ಬಯಲಾಗಿದೆ.

2019-20ರ ಗ್ಲೋಬಲ್ ಟೆರರಿಸಂ ಇಂಡೆಕ್ಸ್ (ಜಿಟಿಐ) ವರದಿ ಪ್ರಕಾರ ಉಗ್ರ ದಾಳಿ ಹಾಗೂ ಅದರಿಂದಾದ ಸಾವಿನ ಸಂಖ್ಯೆ ಸತತ 5 ವರ್ಷಗಳಿಂದ ಭಾರತ ಸೇರಿ ವಿಶ್ವದ 103 ರಾಷ್ಟ್ರಗಳಲ್ಲಿ ಕಡಿಮೆಯಾಗಿದೆ. 2019ರಲ್ಲಿ 63 ದೇಶಗಳಲ್ಲಿ ಕನಿಷ್ಠ ಒಬ್ಬರು ಭಯೋತ್ಪಾದನಾ ದಾಳಿಗೆ ತುತ್ತಾಗಿದ್ದಾರೆ. ಇದು 2013ರ ನಂತರ ದಾಖಲಾದ ಅತೀ ಕಡಿಮೆ ಸಾವಿನ ಪ್ರಮಾಣವೆಂದು ಉಲ್ಲೇಖಿಸಲಾಗಿದೆ.

3 ರಾಜ್ಯಗಳಲ್ಲಿ ಸಕ್ರಿಯ: 2021ರ ಮಾ.15ರಂದು ಎನ್​ಐಎ ಅಧಿಕಾರಿಗಳ ತಂಡ, ಕರ್ನಾಟಕ, ಕೇರಳ ಹಾಗೂ ದೆಹಲಿಯ 11 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದಾಗ ಶಂಕಿತ ಉಗ್ರ ಮಹಮದ್ ಅಮೀನ್ ಅಲಿಯಾಸ್ ಅಬು ಯಾಯಾ, ಸಾಮಾಜಿಕ ಜಾಲತಾಣದಲ್ಲಿ ಹಿಂಸಾತ್ಮಕ ಜಿಹಾದಿ ಸಂದೇಶ ಹರಿಬಿಟ್ಟು ಐಸಿಸ್​ಗೆ ಯುವಕರ ನೇಮಕಾತಿ ಮಾಡುತ್ತಿರುವ ಸಂಗತಿ ದೃಢಪಟ್ಟಿತ್ತು. ಟೆಲಿಗ್ರಾಂ, ಹೂಪ್ ಮತ್ತು ಇನ್​ಸ್ಟಾಗ್ರಾಂನಲ್ಲಿ ಖಾತೆ ತೆರೆದು ಜಿಹಾದಿ ತತ್ವಗಳನ್ನು ಬೋಧಿಸಿ ಯುವಕರನ್ನು ಐಸಿಸ್​ನತ್ತ ಸೆಳೆಯುತ್ತಿದ್ದ. ಉಗ್ರವಾದದ ಬಗ್ಗೆ ಚಾಟ್ ಮಾಡಿರುವ ಕುರಿತು ಎನ್​ಐಎಗೆ ಸಾಕ್ಷ್ಯ ಸಿಕ್ಕಿದೆ. 7 ಶಂಕಿತರು ಹಾಗೂ ಅಪರಿಚಿತರ ವಿರುದ್ಧ ಎಫ್​ಐಆರ್ ದಾಖಲಿಸಿ ಬಂಧನ ಕಾರ್ಯಾಚರಣೆ ಮುಂದುವರಿಸಿದೆ.

ಟಾರ್ಗೆಟ್ ಹೇಗೆ?

  • ಧರ್ಮದ ಹೆಸರಲ್ಲಿ ಜಿಹಾದಿ ಸಂದೇಶ ಹರಿಬಿಟ್ಟು ಯುವಕರ ಬ್ರೇನ್​ವಾಶ್
  • ಸಂಘಟನೆಗೆ ಸೇರ್ಪಡೆಗೊಳ್ಳಲು ಪ್ರೋತ್ಸಾಹ ದಾಯಕ ರೀತಿಯ ಮನಃಪರಿವರ್ತನೆ
  • ಕೆಲವರನ್ನು ಬಲವಂತವಾಗಿ ಸೆಳೆದರೆ ಮತ್ತೆ ಕೆಲವರಿಗೆ ಆರ್ಥಿಕ ಆಮಿಷವೊಡ್ಡಿ ಸೆಳೆಯಲಾಗುತ್ತೆ
  • ಶೇ. 30-35 ಜನರನ್ನು ಧಾರ್ವಿುಕ ವಿಚಾರಗಳಿಂದ ಮನಃಪರಿವರ್ತಿಸಿ ಸೆಳೆಯುತ್ತಾರೆ

ಆನ್​ಲೈನ್ ದಾರಿ ಏಕೆ?

  • ಟಾರ್ಗೆಟ್ ಸುಲಭ, ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಹೆಚ್ಚು
  • ಮೊದಲೆಲ್ಲ ಉಗ್ರ ಸಂದೇಶವನ್ನು ಸ್ಲೀಪರ್ ಸೆಲ್/ಏಜೆಂಟ್​ಗಳ ಮುಖಾಂತರ ರವಾನಿಸುತ್ತಿದ್ದರು
  • ಆನ್​ಲೈನ್ ಪ್ರಕ್ರಿಯೆಗೆ ಹೆಚ್ಚು ಹಣ ಬೇಕಿಲ್ಲ, ಸಮಯ ಉಳಿಸಬಹುದು, ಟ್ವಿಟರ್, ಇನ್​ಸ್ಟಾಗ್ರಾಂ, ಫೇಸ್​ಬುಕ್, ಟೆಲಿಗ್ರಾಂನಲ್ಲಿ ಖಾತೆ ಸೃಷ್ಟಿಸಿ, ನೇರವಾಗಿ ಪ್ರಚಾರ ಮಾಡಬಹುದು
  • ಇಂಟರ್ನೆಟ್ ಸುಲಭವಾಗಿ ಲಭ್ಯ, ಕಡಿಮೆ ಅವಧಿಯಲ್ಲಿ ಹಲವರಿಗೆ ಜಿಹಾದಿ ಸಂದೇಶ ತಲುಪಿಸಲು ಸಾಧ್ಯ
  • ಪ್ರತಿ ಉಗ್ರ ಸಂಘಟನೆಗೂ ವೆಬ್​ಸೈಟ್, ಪ್ರತಿನಿತ್ಯ ವಿಡಿಯೋ, ಆಡಿಯೋ ಸಂದೇಶ ಅಪ್​ಲೋಡ್ ಮಾಡುವುದು ಸುಲಭ
See also  ಜಾರ್ಖಂಡ್ ನಲ್ಲಿ ನಕ್ಸಲ್ ನೆಲಬಾಂಬ್ ದಾಳಿ: ಹುತಾತ್ಮರಾದ 3 ಸೈನಿಕರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು