ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕೊರೋನಾ ಸೋಂಕು, ಬ್ರಿಟನ್ ನಲ್ಲಿ ಮತ್ತೆ ತನ್ನ ಆರ್ಭಟ ಹೆಚ್ಚಿಸಿದೆ. ಒಂದೇ ದಿನಕ್ಕೆ 51,342 ಪ್ರಕರಣಗಳು ಪತ್ತೆಯಾಗುವ ಮೂಲಕ ಮತ್ತೊಂದು ಅಲೆಯ ಆತಂಕ ಮೂಡಿಸಿದೆ.
ಕೋವಿಡ್ ನ ರೂಪಾಂತರಿ ಒಮಿಕ್ರಾನ್ ಸೋಂಕು ಕೂಡ ಬ್ರಿಟನ್ ನಲ್ಲಿ ಹೆಚ್ಚಾಗಿದ್ದು, ಈವರೆಗೂ 568 ಒಮಿಕ್ರಾನ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ತಜ್ಞರು ಬ್ರಿಟನ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮುಂದಿನ ದಿನಗಳಲ್ಲಿ ದೇಶದಲ್ಲಿ ಕೋವಿಡ್ ಹಾಗೂ ಒಮಿಕ್ರಾನ್ ಸೋಂಕು ನಿಯಂತ್ರಿಸಲು ಜನರಿಗೆ ಅನುಕೂಲವಾಗುವಂತೆ ವರ್ಕ್ ಫ್ರಂ ಹೋಂ ನಿಯಮ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಬಹುದಾಗಿದೆ. ಕೆಲವು ಪ್ರದೇಶಗಳಲ್ಲಿ ಮಾಸ್ಕ್ ಜತೆಗೆ ಲಸಿಕೆ ಪ್ರಮಾಣ ಪತ್ರ ಕೂಡ ಕಡ್ಡಾಯಗೊಳಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ಸೋಂಕು ತಡೆಯಲು ಮುಂದಿನ ದಿನಗಳಲ್ಲಿ ಎಲ್ಲರೂ ಬೂಸ್ಟರ್ ಡೋಸ್ ಪಡೆಯಬೇಕು ಎಂದು ಪ್ರಧಾನಿ ಜಾನ್ಸನ್ ಒತ್ತಾಯಿಸಿದ್ದಾರೆ.