ಲಂಡನ್: ಯುನೈಟೆಡ್ ಕಿಂಗ್ಡಂನ ಶ್ರೀಮಂತರ ಸಮೀಕ್ಷೆ ನಡೆಸುವ “ಸಂಡೇ ಟೈಮ್ಸ್’ ಸಂಸ್ಥೆಯು ಈ ವರ್ಷದ ಶ್ರೀಮಂತರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಅದರಲ್ಲಿ ಯು.ಕೆ. ವಿತ್ತ ಸಚಿವ, ಭಾರತ ಮೂಲದ ರಿಷಿ ಸುನಾಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಸ್ಥಾನ ಪಡೆದುಕೊಂಡಿದ್ದಾರೆ. 250 ಮಂದಿ ಇರುವ ಪಟ್ಟಿಯಲ್ಲಿ 222ನೇ ಸ್ಥಾನ ಈ ದಂಪತಿಯದ್ದಾಗಿದೆ. ರಿಶಿ-ಅಕ್ಷತಾ ಅವರ ಆಸ್ತಿ ಮೌಲ್ಯ 7,074 ಕೋಟಿ ರೂ. ಎಂದು ಸಂಡೇ ಟೈಮ್ಸ್ ವರದಿ ಮಾಡಿದೆ.
ಕಳೆದ 34 ವರ್ಷಗಳಿಂದ ಯು.ಕೆ. ಶ್ರೀಮಂತರ ಪಟ್ಟಿ ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಇದೇ ಮೊದಲನೇ ಬಾರಿಗೆ ರಾಜಕಾರಣಿಯೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
ಅಕ್ಷತಾ ಅವರು ತಮ್ಮ ಪೋಷಕರ ಸಂಸ್ಥೆಯಾದ ಇನ್ಫೋಸಿಸ್ನಲ್ಲಿ ಶೇ.0.93 ಷೇರನ್ನು ತಾವು ಹೊಂದಿರುವುದಾಗಿ ಕಳೆದ ವರ್ಷ ಘೋಷಿಸಿಕೊಂಡಿದ್ದರಿಂದಾಗಿ ಅವರು ಈ ವರ್ಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಇನ್ಫೋಸಿಸ್ನಲ್ಲೇ 6,684 ಕೋಟಿ ರೂ. ಆಸ್ತಿ ಇರುವುದಾಗಿ ತಿಳಿಸಲಾಗಿದೆ.
ವಿಶೇಷವೆಂದರೆ ಈ ಪಟ್ಟಿಯಲ್ಲಿ ಹಿಂದುಜಾ ಸಂಸ್ಥೆಯ ಮುಖ್ಯಸ್ಥರಾಗಿರುವ ಗೋಪಿಚಂದ್ ಹಿಂದುಜಾ ಮತ್ತವರ ಕುಟುಂಬವೇ ಯು.ಕೆ. ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಆಸ್ತಿ ಮೌಲ್ಯ 2.75 ಲಕ್ಷ ಕೋಟಿ ರೂ. ಇದೆ.
ಪಟ್ಟಿಯ 3ನೇ ಸ್ಥಾನದಲ್ಲಿ ಭಾರತ ಮೂಲದ ಡೇವಿಡ್ ಮತ್ತು ಸೈಮೆನ್ ರೂಬೆನ್ ಇದ್ದಾರೆ. 250 ಮಂದಿಯ ಪಟ್ಟಿಯಲ್ಲಿ ಹತ್ತಾರು ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ.