ದೇಶಕ್ಕಾಗಿ ಮುಡಿಪಾಗಿಟ್ಟ ಯೋಧರಿಗೆ ಕಳಪೆ ಆಹಾರ ಪೂರೈಕೆ: ಸತ್ಯ ಬಿಚ್ಚಿಟ್ಟ ಯೋಧ!

ದೇಶಕ್ಕಾಗಿ ಮುಡಿಪಾಗಿಟ್ಟ ಯೋಧರಿಗೆ ಕಳಪೆ ಆಹಾರ ಪೂರೈಕೆ: ಸತ್ಯ ಬಿಚ್ಚಿಟ್ಟ ಯೋಧ!

Jan 10, 2017 12:39:06 PM (IST)

ಹೊಸದಿಲ್ಲಿ: ತಮ್ಮ ಜೀವವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರಗಳು ಪೂರೈಕೆಯಾಗುತ್ತಿರುವ ಕರಾಳ ಸತ್ಯವೊಂದನ್ನು ಯೋಧನೊಬ್ಬ ಬಹಿರಂಗಪಡಿಸಿದ್ದಾರೆ.

ತಮ್ಮ ಎಲ್ಲ ಸಂಬಂಧಗಳನ್ನು ಬದಿಗೊತ್ತಿ ಗಡಿಯೇ ತಮ್ಮ ಮನೆ ಎಂದು ತ್ಯಾಗಮಯಿಗಳಾದ ಸಿಪಾಯಿಗಳು ನಮಗೆ ಗೊತ್ತಿರುವಂತೆ ಎದುರಿಸುತ್ತಿರುವ ಸಮಸ್ಯೆಗಳೆಂದ್ರೆ ಉಗ್ರರದ್ದು ಮತ್ತು ಕೊರೆಯುವ ಚಳಿಯಲ್ಲಿ ಕರ್ತವ್ಯ ನಿರ್ವಹಿಸುವುದು. ಆದರೆ ಇವೆಲ್ಲಕ್ಕಿಂತ ಭಯಾನಕವಾದ ಸಮಸ್ಯೆಯನ್ನು ನಮ್ಮ ಯೋಧರು ಎದುರಿಸುತ್ತಿದ್ದಾರೆ.  ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯುವ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ (40) ಎಂಬುವರು ಸೈನಿಕರ ಸ್ಥಿತಿ ಕುರಿತ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಭದ್ರತೆಗೆಂದು ನಿಯೋಜನೆಗೊಂಡಿರುವ 29ನೇ ಬೆಟಾಲಿಯನ್ನ ಯೋಧ ಟಿ.ಬಿ. ಯಾದವ್ ವಿಡಿಯೋ ಮೂಲಕ ಯೋಧರಿಗೆ ನೀಡುವ ಆಹಾರ ಹೇಗಿರುತ್ತದೆ ಎಂದು ತೋರಿಸಿದ್ದಾರೆ.

ದೇಶದ ಜನತೆಗೆ ಶುಭೋದಯಗಳು. ನನ್ನ ನಮನಗಳು. ಈ ಮುಖಾಂತರ ನಾನು ನಿಮ್ಮಲ್ಲೊಂದು ಮನವಿಯೊಂದನ್ನು ಮಾಡಿಕೊಳ್ಳುತ್ತಿದ್ದೇನೆ. ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಗಡಿಯಲ್ಲಿ ನಾವು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಗಳವರೆಗೂ 11 ಗಂಟೆಗಳ ಕಾಲ ಸುದೀರ್ಘವಾಗಿ ಕಾರ್ಯನಿರ್ವಹಿಸುತ್ತೇವೆ. ಮಳೆ ಬರಲೀ, ಗಾಳಿ ಬರಲಿ, ಎಷ್ಟೇ ಮಂಜು ಬೀಳಲೀ ಯಾವುದಕ್ಕೂ ಹಿಂಜರಿಯದೆಯೇ ಕಾರ್ಯನಿರ್ವಹಿಸುತ್ತೇವೆ. ಪ್ರಸ್ತುತ ಇಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಈ ವಿಡಿಯೋ ಮೂಲಕ ನೀವು ನೋಡಬಹುದು. ಇದನ್ನು ನೋಡಿ ನೀವೂ ಖುಷಿ ಕೂಡ ಪಡಬಹುದು. ಆದರೆ, ನಾನು ಎದುರಿಸುತ್ತಿರುವ ಪರಿಸ್ಥಿತಿಯನ್ನು ಮಾಧ್ಯಮಗಳಾಗಲೀ, ರಾಜಕಾರಣಗಳಾಗಲಿ ಕೇಳುವುದಿಲ್ಲ. ಇದಾದ ಬಳಿಕ ನಾನು ನಿಮಗೆ ಇನ್ನೂ ಮೂರು ವಿಡಿಯೋಗಳನ್ನು ಕಳುಹಿಸುತ್ತೇನೆ. ಇದನ್ನು ನೀವು ದೇಶದ ಪ್ರತಿಯೊಂದು ಮಾಧ್ಯಮ ಹಾಗೂ ರಾಜಕಾರಣಿಗಳಿಗೆ ತೋರಿಸಬೇಕೆಂಬುದು ನನ್ನ ಬಯಕೆಯಾಗಿದೆ. ನಮ್ಮ ಹಿರಿಯ ಅಧಿಕಾರಿಗಳು ನಮಗೆ ಯಾವ ರೀತಿಯ ಅನ್ಯಾಯ ಮಾಡುತ್ತಿದ್ದಾರೆಂಬುದು ಆ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಇದು ಅಲ್ಲದೇ 'ನಾನು ಪ್ರಧಾನಿಯವರಿಗೆ ಮನವಿ ಮಾಡುತ್ತೇನೆ. ಈ ಬಗ್ಗೆ ತನಿಖೆ ನಡೆಯಬೇಕು' ಎಂದು ಅವರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ 'ವಿಡಿಯೋ ಹಾಕಿದ ನಂತರ ನಾನು ಜೀವಂತವಾಗಿ ಇರ್ತಿನೋ ಇಲ್ಲವೋ ಗೊತ್ತಿಲ್ಲ' ಎಂದೂ ಯೋಧ ಯಾದವ್ ತಮ್ಮ ವಿಡಿಯೋದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.  ಈ ವಿಡಿಯೋವನ್ನು ಸಾಧ್ಯವಾದಷ್ಟು ಹೆಚ್ಚು ಶೇರ್ ಮಾಡಿ. ಈ ಮೂಲಕ ಮಾಧ್ಯಮಗಳೂ ಯೋಧರ ಕಷ್ಟವನ್ನು ಜನರಿಗೆ ತೋರಿಸಲಿ. ಮುಂದೆ ಮತ್ತಷ್ಟು ವಿಡಿಯೋಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಈ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಜೈ ಹಿಂದ್ ಎಂದು ತೇಜ್ ಬಹದ್ದೂರ್ ಯಾದವ್ ಅವರು ಹೇಳಿದ್ದಾರೆ.