ಮಹೀಂದ್ರಾ ಲಾಜಸ್ಟಿಕ್ಸ್ ಸಂಸ್ಥೆಯಿಂದ 'ಆಕ್ಸಿಜನ್‌ ಆನ್ ವೀಲ್ಸ್' ಸೇವೆಗೆ ಚಾಲನೆ

ಮಹೀಂದ್ರಾ ಲಾಜಸ್ಟಿಕ್ಸ್ ಸಂಸ್ಥೆಯಿಂದ 'ಆಕ್ಸಿಜನ್‌ ಆನ್ ವೀಲ್ಸ್' ಸೇವೆಗೆ ಚಾಲನೆ

Jayashree Aryapu   ¦    May 04, 2021 04:37:31 PM (IST)
ಮಹೀಂದ್ರಾ ಲಾಜಸ್ಟಿಕ್ಸ್ ಸಂಸ್ಥೆಯಿಂದ 'ಆಕ್ಸಿಜನ್‌ ಆನ್ ವೀಲ್ಸ್' ಸೇವೆಗೆ ಚಾಲನೆ

ಮುಂಬೈ: ಮಹೀಂದ್ರಾ ಲಾಜಿಸ್ಟಿಕ್ಸ್‌ ಸಂಸ್ಥೆಯು 'ಆಕ್ಸಿಜನ್‌ ಆನ್‌ ವೀಲ್ಸ್‌' ಸೇವೆಗೆ ಮಂಗಳವಾರ ಚಾಲನೆ ನೀಡಿದೆ.

ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಉಚಿತ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯಡಿ ಆಮ್ಲಜನಕ ಉತ್ಪಾದಕರು ಮತ್ತು ಆಸ್ಪತ್ರೆ, ಆರೋಗ್ಯ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸಲಾಗುವುದು.

ಈ ಸೇವೆಯು ಮಹಾರಾಷ್ಟ್ರದ ಮುಂಬೈ, ಠಾಣೆ, ಪುಣೆ, ಪಿಂಪ್ರಿ-ಚಿಂಚ್‌ವಾಡ್, ನಾಸಿಕ್‌, ನಾಗಪುರದಲ್ಲಿ ಲಭ್ಯವಿದೆ. ಆಕ್ಸಿಜನ್‌ ಆನ್‌ ವೀಲ್ಸ್‌ ಸೇವೆಯಡಿ ಅಗತ್ಯವಿರುವ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ತ್ವರಿತವಾಗಿ ತಲುಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

'ಈ ಸೇವೆಗಾಗಿ ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಳ್ಳಲಾಗಿದೆ.

ಆಮ್ಲಜನಕ ಕೊರತೆಯನ್ನು ಎದುರಿಸುತ್ತಿರುವ ದೆಹಲಿಯಂತಹ ಇತರ ನಗರಗಳಲ್ಲೂ ಈ ಸೇವೆಯನ್ನು ವಿಸ್ತರಿಸುವ ಕುರಿತಾಗಿ ಆಯಾ ನಗರಗಳ ಸ್ಥಳೀಯ ಆಡಳಿತದೊಂದಿಗೆ ಮಾತುಕತೆಯನ್ನು ನಡೆಸಲಾಗುತ್ತಿದೆ' ಎಂದು ಮಹೀಂದ್ರಾ ಆಯಂಡ್‌ ಮಹೀಂದ್ರಾ ಸಂಸ್ಥೆ ಹೇಳಿದೆ.

'ಕಳೆದ 48 ಗಂಟೆಗಳಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ನಾವು ಆಕ್ಸಿಜನ್‌ ಆನ್‌ ವೀಲ್ಸ್‌ ಸೇವೆಯ ಮೂಲಕ ಮನೆಗಳಲ್ಲಿರುವ ರೋಗಿಗಳಿಗೂ ಆಮ್ಲಜನಕ ವಿತರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ' ಎಂದು ಸಂಸ್ಥೆ ತಿಳಿಸಿದೆ.

'ಆಕ್ಸಿಜನ್‌ ಆನ್‌ ವೀಲ್ಸ್‌ ಸೇವೆಯ ಮೂಲಕ ನಾವು ಆರೋಗ್ಯ ಕಾರ್ಯಕರ್ತರ ಮೇಲಿರುವ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯವಿರುವ ಆಸ್ಪತ್ರೆಗಳಿಗೆ ಆಮ್ಲಜನಕ ವಿತರಿಸುವ ಮೂಲಕ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತೇವೆ' ಎಂದು ಮಹೀಂದ್ರಾ ಗ್ರೂಪ್‌ನ ಸಿಇಒ ಅನೀಶ್‌ ಶಾ ಅವರು ಮಾಹಿತಿ ನೀಡಿದರು.