ಕಾಂಗ್ರೆಸ್ ನವರ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ: ಸಲ್ಮಾನ್ ಖುರ್ಷಿದ್

ಕಾಂಗ್ರೆಸ್ ನವರ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ: ಸಲ್ಮಾನ್ ಖುರ್ಷಿದ್

HSA   ¦    Apr 24, 2018 05:01:56 PM (IST)
ಕಾಂಗ್ರೆಸ್ ನವರ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ: ಸಲ್ಮಾನ್ ಖುರ್ಷಿದ್

ಅಲೀಘಡ್: ಕಾಂಗ್ರೆಸ್ಸಿಗರ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆಗಳು ಇವೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ಹೇಳಿರುವುದು ಈಗ ಭಾರೀ ತಲ್ಲಣ ಉಂಟು ಮಾಡಿದೆ.

ಅಲಿಘಡ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಅಮಿರ್ ಮಿಂಟೊಯಿ ಕಾಂಗ್ರೆಸ್ ಆಡಳಿತದಲ್ಲೇ ಹೆಚ್ಚಿನ ದಂಗೆಗಳು ನಡೆದಿದೆಯಲ್ಲಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖುರ್ಷಿದ್ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಮರ ರಕ್ತದ ಕಲೆಯಿದೆ. ಪಕ್ಷದ ನಾಯಕನಾಗಿ ನನ್ನ ಕೈಯಲ್ಲೂ ಈ ಕಲೆಗಳು ಇದೆಯೆಂದು ನಾನು ಭಾವಿಸುತ್ತೇನೆ ಎಂದರು.

1948ರಲ್ಲಿ ಎಎಂಯು ಕಾಯ್ದೆ ಜಾರಿಗೆ ಬಂತು ಮತ್ತು 1950ರಲ್ಲಿ ರಾಷ್ಟ್ರಪತಿ ಆದೇಶದಿಂದಾಗಿ ಎಸ್ ಸಿ/ಎಸ್ ಟಿ ಕಾಯ್ದೆಯಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಿಗದಾಯಿತು. ಹಶಿಂಪುರ, ಮಲಯಾನ, ಮೀರತ್, ಮುಝಫ್ಫರ್ ನಗರ, ಭಾಗಲ್ಪುರ, ಮೊರದಾಬಾದ್ ಮತ್ತು ಅಲಿಘಡ್ ನಲ್ಲಿ ಮುಸ್ಲಿಮರ ಮೇಲೆ ದಂಗೆಗಳಾದವು. ಕಾಂಗ್ರೆಸ್ ನ ಅಧಿಕಾರದಲ್ಲಿಯೇ ಬಾಬರಿ ಮಸೀದಿ ಧ್ವಂಸವಾಯಿತು. ನೀವು ರಕ್ತದ ಕಲೆಗಳನ್ನು ಹೇಗೆ ತೊಳೆಯುತ್ತೀರಿ ಎಂದು ಮಿಂಟೊಯಿ ಪ್ರಶ್ನಿಸಿದ.

ನಿಮ್ಮ ಕೈಯಲ್ಲೂ ರಕ್ತದ ಕಲೆಗಳು ಆಗಬಹುದು. ನಮ್ಮ ಇತಿಹಾಸ ನೋಡಿ ನೀವು ಕಲಿತುಕೊಳ್ಳಿ. ಹತ್ತು ವರ್ಷ ಬಿಟ್ಟು ಮರಳಿದಾಗ ನಿಮಗೂ ಇಲ್ಲಿ ಇಂತಹ ಪ್ರಶ್ನೆ ಬರಬಹುದು ಎಂದು ಖುರ್ಷಿದ್ ತಿಳಿಸಿದರು.

ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು, ಕಾಂಗ್ರೆಸ್ ತನ್ನ ಪಾಪಕ್ಕೆ ಈಗ ಬೆಲೆ ತೆರಬೇಕಾಗಿದೆ ಎಂದರು.