ಪುಲ್ವಾಮಾ ದಾಳಿಯ ಹುತಾತ್ಮ ಯೋಧರ ಚಿತಾಭಸ್ಮ ಸಂಗ್ರಹಕ್ಕೆ 61 ಸಾವಿರ ಕಿ.ಮೀ. ಕ್ರಮಿಸಿದ ಬೆಂಗಳೂರಿನ ಗಾಯಕ

ಪುಲ್ವಾಮಾ ದಾಳಿಯ ಹುತಾತ್ಮ ಯೋಧರ ಚಿತಾಭಸ್ಮ ಸಂಗ್ರಹಕ್ಕೆ 61 ಸಾವಿರ ಕಿ.ಮೀ. ಕ್ರಮಿಸಿದ ಬೆಂಗಳೂರಿನ ಗಾಯಕ

HSA   ¦    Feb 14, 2020 05:16:24 PM (IST)
ಪುಲ್ವಾಮಾ ದಾಳಿಯ ಹುತಾತ್ಮ ಯೋಧರ ಚಿತಾಭಸ್ಮ ಸಂಗ್ರಹಕ್ಕೆ 61 ಸಾವಿರ ಕಿ.ಮೀ. ಕ್ರಮಿಸಿದ ಬೆಂಗಳೂರಿನ ಗಾಯಕ

ನವದೆಹಲಿ: ಕಳೆದ ವರ್ಷ ಉಗ್ರರ ದಾಳಿಗೆ ಗುರಿಯಾದ ಸುಮಾರು 40 ಮಂದಿ ಯೋಧರ ಹುಟ್ಟೂರಿಗೆ ತೆರಳಿ, ಅವರ ಮನೆಯ ಅಂಗಳದ ಮಣ್ಣು ಮತ್ತು ಚಿತಾಭಸ್ಮ ತರಲು ಬೆಂಗಳೂರು ಮೂಲದ ಗಾಯಕ ಉಮೇಶ್ ಗೋಪಿನಾಥ್ ಜಾಧವ್ ಅವರು ಇದುವರೆಗೆ ಸುಮಾರು 61 ಸಾವಿರ ಕಿ.ಮೀ. ಪ್ರಯಾಣಿಸಿರುವರು.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಹುತಾತ್ಮ ಯೋಧರ ಕುಟುಂಬವನ್ನು ಭೇಟಿ ಮಾಡಿದ ಜಾಧವ್ ಅವರು ಶುಕ್ರವಾರ ಲೆಥೊಪೊರಾ ಶಿಬಿರದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯಲ್ಲಿ ಹುತಾತ್ಮ ಸ್ಮಾರಕದಲ್ಲಿ ಅವರು ಚಿತಾಭಸ್ಮವನ್ನು ಪ್ರದರ್ಶಿಸಿದರು.

ಪುಲ್ವಾಮಾದಲ್ಲಿ ಹುತಾತ್ಮರಾದ 40 ಮಂದಿ ಯೋಧರ ಕುಟುಂಬಗಳನ್ನು ಭೇಟಿ ಮಾಡಿರುವುದು ಹೆಮ್ಮೆಯೆನಿಸುತ್ತಿದೆ ಮತ್ತು ಅವರ ಆಶೀರ್ವಾದ ಪಡೆದಿದ್ದೇನೆ. ಪೋಷಕರು ಮಗನನ್ನು ಕಳಕೊಂಡಿರುವರು, ಪತ್ನಿಯು ಪತಿಯನ್ನು, ಮಕ್ಕಳು ತಂದೆಯನ್ನು ಮತ್ತು ಸ್ನೇಹಿತರು ಸ್ನೇಹಿತರನ್ನು ಕಳಕೊಂಡಿದ್ದಾರೆ. ನಾನು ಅವರ ಮನೆಯ ಮುಂದಿನ ಮತ್ತು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿ ಮಣ್ಣನ್ನು ಸಂಗ್ರಹಿಸಿದ್ದೇನೆ ಎಂದು ಜಾಧವ್ ಹೇಳಿದರು.

ತಮ್ಮ ಪ್ರಾಣ ಕಳಕೊಂಡ ಯೋಧರಿಗೆ ನಮನ ಸಲ್ಲಿಸಲು ತಾನು ಈ ಕೆಲಸ ಮಾಡಿದ್ದೇನೆ. ಇದಕ್ಕಾಗಿ ನಾನು ಯಾವುದೇ ದೇಣಿಗೆ ಅಥವಾ ಪ್ರಾಯೋಜಕತ್ವ ಪಡೆದಿಲ್ಲ ಎಂದು ಅವರು ತಿಳಿಸಿದರು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಯೋಧರ ಹೆಸರನ್ನು ಒಳಗೊಂಡಿರುವ ಸ್ಮಾರಕವು ಲೆಥಪೋರಾದಲ್ಲಿ ನಿರ್ಮಾಣ ಮಾಡಲಾಗಿದೆ.