ನವದೆಹಲಿ: ಕಳೆದ ಏಳು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳು ಬಂದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದರು.
ಎಫ್‌ಐಸಿಸಿಐ ವಾರ್ಷಿಕ ಸಮಾವೇಶ ಮತ್ತು 94ನೇ ವಾರ್ಷಿಕ ಮಹಾಸಭೆಯಲ್ಲಿ ‘ಇಂಡಿಯಾ ಬಿಯಾಂಡ್ 75’ ಎಂಬ ವಿಷಯದ ಕುರಿತು ಮಾತನಾಡಿದ ಶಾ, ‘ಕೆಲವು ತಪ್ಪು ನಿರ್ಧಾರಗಳು ನಮ್ಮಿಂದ ಆಗಿರಬಹುದು.
ಆದರೆ ನಮ್ಮ ಉದ್ದೇಶ ತಪ್ಪು ಎಂದು ಯಾರೂ ಹೇಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಇದೇ ವೇಳೆ ಶ್ಲಾಘಿಸಿದ ಶಾ, ‘ ಜನರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಾರಂಭಿಸಿದ್ದ ದಿನಗಳಲ್ಲಿ ಮೋದಿ ಅಧಿಕಾರ ವಹಿಸಿಕೊಂಡರು. ನಮ್ಮ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ವಿಫಲವಾಗುತ್ತಿದೆಯೇ ಎಂದು ದೇಶವು ಆಶ್ಚರ್ಯ ಪಡುತ್ತಿತ್ತು. ಆದರೆ, ನರೇಂದ್ರ ಮೋದಿ ಅವರು ನಮ್ಮ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಮೂಡುವಂತೆ ಮಾಡಿದ್ದಾರೆ. ಇದು ಅವರ ಬಹುದೊಡ್ಡ ಸಾಧನೆ,’ ಎಂದು ಅವರು ಹೇಳಿದರು. ಈ ಬಗ್ಗೆ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.