News Kannada
Monday, February 06 2023

ದೆಹಲಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ ವಿವಿಧ ಘೋಷಣೆಗಳ ಮುಖ್ಯಾಂಶಗಳು

Photo Credit :

ನವದೆಹಲಿ, ಮೇ. 21: ಅಂತರರಾಷ್ಟ್ರೀಯ ಬಿಕ್ಕಟ್ಟು ಇದ್ದರೂ ಕೇಂದ್ರ ಸರಕಾರ ಅಗತ್ಯ ವಸ್ತುಗಳಿಗೆ ಕೊರತೆ ಉಂಟಾಗದಂತೆ ನೋಡಿಕೊಂಡಿದೆ. ಕೆಲ ಮುಂದುವರಿದ ದೇಶಗಳಿಂದಲೂ ಸಾಧ್ಯವಾಗದ ಕೆಲಸವನ್ನು ಭಾರತ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ, ರಸಗೊಬ್ಬರ ಸಬ್ಸಿಡಿ ಮೊತ್ತಕ್ಕೆ ಇನ್ನಷ್ಟು ಹಣ ಬಿಡುಗಡೆ ಇತ್ಯಾದಿ ಕ್ರಮಗಳನ್ನು ಪ್ರಕಟಿಸಿರುವ ನಿರ್ಮಲಾ ಸೀತಾರಾಮನ್, ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆಗಳನ್ನು ಹತೋಟಿಯಲ್ಲಿ ಇಡಲಾಗಿದೆ ಎಂದಿದ್ದಾರೆ.

ನೆರೆಯ ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳ ಆರ್ಥಿಕತೆಗಳು ಕುಸಿಯುತ್ತಿರುವಂತೆ ಭಾರತಕ್ಕೂ ಮುಂದೆ ಆರ್ಥಿಕ ಸಂಕಷ್ಟ ಕಾಡಲಿದೆ ಎಂದು ಕೆಲ ಆರ್ಥಿಕ ತಜ್ಞರು ಎಚ್ಚರಿಸಿದ್ದರು. ಜೊತೆಗೆ ಭಾರತದಲ್ಲಿ ಹಣದುಬ್ಬರ ಹಾಗೂ ವಿವಿಧ ಉಬ್ಬರಗಳನ್ನು ಹತೋಟಿಗೆ ತರಲು ಆರ್‌ಬಿಐ ಕೂಡ ಬಡ್ಡಿ ದರಗಳನ್ನು ಏರಿಕೆ ಮಾಡಿತ್ತು. ಕಳೆದ ತಿಂಗಳಲ್ಲಿ ಸಗಟು ಮತ್ತು ಗ್ರಾಹಕ ಬೆಲೆಗಳು ವೇಗವಾಗಿ ಹೆಚ್ಚಳ ಕಂಡಿದ್ದವು. ಈ ಎಲ್ಲಾ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು ಇಂದು ಸರಣಿ ಟ್ವೀಟ್‌ಗಳನ್ನು ಮಾಡಿ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದ್ಧಾರೆ.

“ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಂದಿನಿಂದ ನಮ್ಮ ಸರಕಾರ ಬಡಜನರ ಕಲ್ಯಾಣಕ್ಕೆ ಮುಡಿಪಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಸಹಾಯವಾಗುವ ಹಲವು ಕ್ರಮಗಳನ್ನು ಕೈಗೊಂಡಿದ್ಧೇವೆ. ಇದರ ಪರಿಣಾಮವಾಗಿ ಹಿಂದಿನ ಸರಕಾರಗಳ ಆಡಳಿತದ ಅವಧಿಗಿಂತಲೂ ನಮ್ಮ ಅವಧಿಯಲ್ಲಿ ಸರಾಸರಿ ಹಣದುಬ್ಬರ ಕಡಿಮೆಯೇ ಇದೆ” ಎಂದು ನಿರ್ಮಲಾ ಸೀತಾರಾಮನ್ ತಮ್ಮ ಸರಣಿ ಟ್ವೀಟ್‌ಗಳನ್ನು ಆರಂಭಿಸಿದರು.
“ಇವತ್ತು ವಿಶ್ವವು ಸಂಕಷ್ಟದ ಸಂದರ್ಭದಲ್ಲಿದೆ. ಕೋವಿಡ್ ಸಾಂಕ್ರಾಮಿಕದಿಂದ ಜಗತ್ತು ಚೇತರಿಸಿಕೊಳ್ಳುತ್ತಿರುವಂತೆಯೇ ಉಕ್ರೇನ್ ಯುದ್ಧ ಬಿಕ್ಕಟ್ಟಿನಿಂದ ಹಲವು ವಸ್ತುಗಳ ಕೊರತೆ ಎದುರಾಗಿದೆ. ಅವುಗಳ ಸರಬರಾಜು ಸರಪಳಿಗೆ ಭಂಗವಾಗಿದೆ. ಇದರಿಂದ ಬಹಳಷ್ಟು ದೇಶಗಳಲ್ಲಿ ಆರ್ಥಿಕ ಮುಗ್ಗಟ್ಟು ಮತ್ತು ಹಣದುಬ್ಬರಕ್ಕೆ ಎಡೆ ಮಾಡಿಕೊಟ್ಟಿದೆ.

“ಸಾಂಕ್ರಾಮಿಕ ಕಾಲದಲ್ಲೂ ನಮ್ಮ ಸರಕಾರ ಜನಕಲ್ಯಾಣಕ್ಕೆ ಬದ್ಧವಾಗಿದೆ. ಅದರಲ್ಲೂ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಜಾರಿಗೆ ತಂದಿತು. ಇದಕ್ಕೆ ವಿಶ್ವಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ” ಎಂದು ನಿರ್ಮಲಾ ಸೀತಾರಾಮನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರಕಾರ ರಸಗೊಬ್ಬರ ಸಬ್ಸಿಡಿಗೆಂದು 1.05 ಲಕ್ಷ ಕೋಟಿ ರೂ ಮೀಸಲಿಟ್ಟಿತ್ತು. ಈಗ ರೈತರಿಗೆ ಇನ್ನಷ್ಟು ಅನುಕೂಲವಾಗಲೆಂದು 1.10 ಲಕ್ಷಕೋಟಿಯಷ್ಟು ಹೆಚ್ಚುವರಿ ಮೊತ್ತವನ್ನು ಜೋಡಿಸಲು ನಿರ್ದರಿಸಿದೆ. ಜಾಗತಿಕವಾಗಿ ರಸಗೊಬ್ಬರ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ರಸಗೊಬ್ಬರ ಬೆಲೆ ಏರಿಕೆ ಆಗದಂತೆ ಸಬ್ಸಿಡಿ ಹಣವನ್ನು ಹೆಚ್ಚಿಸಿದೆ. ನಿರ್ಮಲಾ ಸೀತಾರಾಮನ್ ತಮ್ಮ ಟ್ವೀಟ್‌ವೊಂದರಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ.

ಪೆಟ್ರೋಲ್ ಮತ್ತು ಡಿಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಲೀಟರ್‌ಗೆ 8 ಮತ್ತು 6 ರೂನಂತೆ ಇಳಿಕೆ ಮಾಡಲಾಗಿದೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ ಒಂದು ಲೀಟರ್‌ಗೆ 9.5 ರೂ ಹಾಗು ಡೀಸೆಲ್ ಬೆಲೆ ಒಂದು ಲೀಟರ್‌ಗೆ 7 ರೂ ಇಳಿಕೆ ಆಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಕೇಂದ್ರಕ್ಕೆ ಈ ಕ್ರಮದಿಂದ ಒಂದು ವರ್ಷದಲ್ಲಿ 1 ಲಕ್ಷ ಕೋಟಿ ರೂ ಆದಾಯ ನಷ್ಟವಾಗಲಿದೆಯಂತೆ.

See also  ಜಪಾನ್‌ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ಆದ ಪ್ರಧಾನಿ ನರೇಂದ್ರ ಮೋದಿ

ಇದೇ ವೇಳೆ, ಅಬಕಾರಿ ಸುಂಕ ಕಡಿತ ಮಾಡಿದ ಬೆನ್ನಲ್ಲೇ ಸಚಿವರು, ತೆರಿಗೆ ಕಡಿತ ಮಾಡುವಂತೆ ರಾಜ್ಯ ಸರಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
ಈ ವರ್ಷ ಒಂದು ಅಡುಗೆ ಅನಿಲದ ಸಿಲಿಂಡರ್‌ಗೆ 200 ರೂ ಸಬ್ಸಿಡಿ ನೀಡುವುದಾಗಿ ಹಣಕಾಸು ಸಚಿವರು ನಿರ್ಧಾರ ಪ್ರಕಟಿಸಿದ್ದಾರೆ. ಈ ಸೌಲಭ್ಯ ಒಂದು ವರ್ಷದಲ್ಲಿ ಗರಿಷ್ಠ 12 ಸಿಲಿಂಡರ್‌ಗಳಿಗೆ ಅನ್ವಯ ಆಗುತ್ತದೆ. ಭಾರತದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 9 ಕೋಟಿ ಕುಟುಂಬಗಳು ಅಡುಗೆ ಅನಿಲದ ಫಲಾನುಭವಿಗಳಿವೆ. ಇದರಿಂದ ವರ್ಷಕ್ಕೆ ಸರಕಾರ 6100 ಕೋಟಿ ರೂ ಆದಾಯ ನಷ್ಟ ಅನುಭವಿಸುವ ನಿರೀಕ್ಷೆ ಇದೆ.

ನಾವು ಹೆಚ್ಚಾಗಿ ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್ ಉತ್ಪನ್ನಗಳ ಸ್ಥಳೀಯ ತಯಾರಿಕೆಗೆ ಬೇಕಾದ ಕಚ್ಛಾ ಸಾಮಗ್ರಿಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯ ವೆಚ್ಚ ಕಡಿಮೆ ಆಗುತ್ತದೆ ಎಂಬ ಅಂದಾಜಿದೆ.

ಹಾಗೆಯೇ, ಉಕ್ಕು ಮತ್ತು ಕಬ್ಬಿಣದ ಕಚ್ಛಾ ಸಾಮಗ್ರಿಗಳ ಮೇಲಿನ ಸುಂಕವನ್ನೂ ಇಳಿಕೆ ಮಾಡುವ ಯೋಜನೆಯಲ್ಲಿ ಸರಕಾರ ಇದೆ. ಉಕ್ಕಿನ ಕೆಲ ಕಚ್ಛಾ ಸಾಮಗ್ರಿಗಳ ಆಮದು ಸುಂಕವನ್ನೂ ಕಡಿಮೆ ಮಾಡಲಾಗುವುದು. ಕೆಲ ಉಕ್ಕು ಉತ್ಪನ್ನಗಳ ರಫ್ತಿಗೆ ಸುಂಕ ವಿಧಿಸಲಾಗುವುದು ಎಂದು ಕೇಂದ್ರ ಸಚಿವೆ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇನ್ನು, ಸಿಮೆಂಟ್‌ನ ದರ ತಗ್ಗಿಸಲು ಅನುವಾಗುವ ರೀತಿಯಲ್ಲಿ ಸರಬರಾಜು ಸರಪಳಿಯನ್ನು ಉತ್ತಮಪಡಿಸಲು ಮತ್ತು ಸಿಮೆಂಟ್ ಲಭ್ಯತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು