ನವದೆಹಲಿ: ಭಾರತಕ್ಕೆ ಮಂಕಿ ಪಾಕ್ಸ್ ಸೋಂಕು ಕಾಲಿಟ್ಟಿದ್ದು, ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ, ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರು ಕಾಯಿಲೆಯ ವ್ಯಕ್ತಿಗಳ ಸಂಪರ್ಕದಿಂದ ದೂರ ಉಳಿಯಬೇಕು. ಪ್ರಾಣಿಗಳ ಸಂಪರ್ಕದಿಂದಲೂ ದೂರವಿರಬೇಕು ಹಾಗೂ ಮಾಂಸದಡುಗೆ ಮಾಡಬಾರದು ಅಥವಾ ಮಾಂಸದ ಖಾದ್ಯಗಳನ್ನು ಸೇವಿಸಬಾರದು.
ಆಫ್ರಿಕಾದ ಪ್ರಾಣಿ ಜನ್ಯ ಉತ್ಪಾದನೆಗಳಾದ ಕ್ರೀಮ್‌ಗಳು, ಲೋಷನ್‌ಗಳು, ಪೌಡರ್‌ಗಳನ್ನು ಬಳಸಬಾರದು. ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಮಂಕಿ ಪಾಕ್ಸ್‌ಗೆ ತುತ್ತಾಗಿರುವ ವ್ಯಕ್ತಿಗಳು ಬಳಸಿದ ಉಡುಪುಗಳು, ಹಾಸಿಗೆ-ದಿಂಬುಗಳಿಂದ ದೂರವಿರಬೇಕು ಹಾಗೂ ಮಂಕಿಪಾಕ್ಸ್‌ಗೆ ತುತ್ತಾದ ವ್ಯಕ್ತಿಗಳಿಂದ ನಿರ್ವಹಿಸಲ್ಪಟ್ಟ ಸಾಕು ಪ್ರಾಣಿಗಳಿಂದಲೂ ದೂರವಿರಬೇಕು.
ಮಂಕಿಪಾಕ್ಸ್ ಸೋಂಕು ಹರಡಿರುವ ಪ್ರಾಂತ್ಯಗಳಲ್ಲಿರುವವರು, ತಮ್ಮಲ್ಲಿ ಸೋಂಕಿನ ಲಕ್ಷಣಗಳಾದ ಜ್ವರ, ಚರ್ಮದ ಸೋಂಕಿನಂಥವು ಗಮನಕ್ಕೆ ಬಂದ ಕೂಡಲೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಔಷಧೋಪಚಾರ ಪಡೆಯಬೇಕು.