ಧನ್ಬಾದ್, ಜ.28: ಜಾರ್ಖಂಡ್ ನ ಧನ್ಬಾದ್ ಜಿಲ್ಲೆಯ ಹಜ್ರಾ ಆಸ್ಪತ್ರೆಯಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ವೈದ್ಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ಇಲಾಖೆಗೆ ಮಾಹಿತಿ ದೊರೆತಾಗ, ಬೆಂಕಿಯನ್ನು ನಂದಿಸಲು ಆರು ಅಗ್ನಿಶಾಮಕ ಟೆಂಡರ್ ಗಳನ್ನು ಸೇವೆಗೆ ಕಳುಹಿಸಲಾಯಿತು. ಎರಡನೇ ಮಹಡಿಯಲ್ಲಿ ಮುಂಜಾನೆ 2.30 ಕ್ಕೆ ಬೆಂಕಿ ಕಾಣಿಸಿಕೊಂಡಿತು ಮತ್ತು ಶೀಘ್ರದಲ್ಲೇ ಇಡೀ ಆಸ್ಪತ್ರೆಗೆ ಹರಡಿತು, ಬೆಳಿಗ್ಗೆ 10ರ ವೇಳೆಗೆ ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು.
ಎರಡನೇ ಮಹಡಿಯಲ್ಲಿರುವ ವೈದ್ಯಕೀಯ ಸೌಲಭ್ಯದ ವಸತಿ ಸಂಕೀರ್ಣದಲ್ಲಿ ಮಲಗಿದ್ದ ಡಾ.ಪ್ರೇಮಾ, ಡಾ.ವಿಕಾಸ್ ಹಜ್ರಾ ಮತ್ತು ಆಸ್ಪತ್ರೆಯ ನಾಲ್ವರು ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂಬತ್ತು ಜನರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಪಾಟಲಿಪುತ್ರ ನರ್ಸಿಂಗ್ ಹೋಂಗೆ ಸಾಗಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯನ್ನು ನಂದಿಸಲು ಆಸ್ಪತ್ರೆಯಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲ ಮತ್ತು ಅಗ್ನಿಶಾಮಕ ವಿರೋಧಿ ಯಂತ್ರವೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಎಂಎ ರಾಜ್ಯ ಘಟಕದ ಅಧ್ಯಕ್ಷ ಎ.ಕೆ.ಸಿಂಗ್ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಮೇಜರ್ ಚಂದನ್ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.