ತಮಿಳುನಾಡಿನಲ್ಲಿ ಮಳೆಯ ರೌದ್ರನರ್ತನ ಮುಂದುವರೆದಿದ್ದು, ಇದುವರೆಗೂ ಮಹಾಮಳೆಗೆ ಎಂಟು ಜನ ಬಲಿಯಾಗಿದ್ದಾರೆ. ನಿನ್ನೆ ಒಂದೇ ದಿನ ಮೂವರು ಮೃತಪಟ್ಟಿದ್ದಾರೆ.
ತಮಿಳುನಾಡಿನ ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಪುದುಕೊಟ್ಟೈ ಮತ್ತು ನಾಗಪಟ್ಟಣಂ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಇಂದು ಕೂಡ ಧಾರಾಕಾರ ಮಳೆಯ ನಿರೀಕ್ಷೆ ಇದ್ದು, 23 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಕಳೆದ ಮೂರು ದಿನದಿಂದ ರಜೆ ನೀಡಲಾಗಿದೆ.
ಚಿಂಗಲ್‌ಪೇಟೆಯಲ್ಲಿ ಮತ್ತು ಕಾಂಚೀಪುರಂನಲ್ಲಿ ತಲಾ ಒಂದೊಂದು ಎನ್‌ಡಿಆರ್‌ಎಫ್ ತಂಡವನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ತಮಿಳುನಾಡು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್ಎಸ್ಆರ್ ರಾಮಚಂದ್ರನ್ ಹೇಳಿದ್ದಾರೆ.
ಒಂದೇ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಲವಾರು ಪ್ರದೇಶಗಳಲ್ಲಿ ತೀವ್ರ ಜಲಾವೃತ ಮತ್ತು ಪ್ರವಾಹ ಉಂಟಾಗಿದೆ. ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ನಿಂತಿದೆ. ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿತ್ತು.
ತಮಿಳುನಾಡಿನಲ್ಲಿ ಈ ವರ್ಷ ಸುರಿದ ಧಾರಾಕಾರ ಮಳೆಯ ರೀತಿ ಮಹಾನಗರಿ ಮಳೆ ಕಂಡಿದ್ದು 200 ವರ್ಷಗಳ ಹಿಂದೆಯಂತೆ. ಮಳೆಯ ತೀವ್ರತೆ ಎಷ್ಟಿತ್ತೆಂದರೆ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.