ಅಗರ್ತಲಾ: ದಕ್ಷಿಣ ತ್ರಿಪುರಾದಲ್ಲಿ ಶನಿವಾರ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಸಿಪಿಐ-ಎಂ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು. ಎರಡು ಪಕ್ಷಗಳು ಅವಳಿ ಅಲಗಿನ ಕತ್ತಿಯಿದ್ದಂತೆ ಈ ಬಗ್ಗೆ ಎಚ್ಚರವಾಗಿರುವಂತೆ ರ‍್ಯಾಲಿಯಲ್ಲಿ ಕೇಳಿಕೊಂಡರು.
ಗೋಮತಿ ಜಿಲ್ಲೆಯ ಉದಯಪುರದಲ್ಲಿ ಶನಿವಾರ ನಡೆದ ಎರಡನೇ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕೇರಳದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪರಸ್ಪರ ವಿರುದ್ಧ ನಿಲುವು ಹೊಂದಿ ಹೋರಾಡುತ್ತಿವೆ. ಆದರೆ ತ್ರಿಪುರಾದಲ್ಲಿ ಒಟ್ಟಿಗೆ ಚುನಾವಣೆ ಎದುರಿಸುತ್ತಿವೆ. “ಕಾಂಗ್ರೆಸ್ ಮತ್ತು ಎಡಪಕ್ಷಗಳು ಯಾವಾಗಲೂ ಬಡವರು ಬಡವರಾಗಿರಬೇಕು ಎಂದು ಬಯಸುತ್ತಾರೆ. ಅವರು ಯಾವಾಗಲೂ ‘ಗೂಂಡಾಗಳು’ ಮತ್ತು ಭ್ರಷ್ಟಾಚಾರವನ್ನು ಉತ್ತೇಜಿಸುತ್ತಾರೆ,” ಎಂದು ಪ್ರಧಾನಿ ಹೇಳಿದರು.
60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ರಂದು ನಡೆಯಲಿರುವ ಚುನಾವಣೆಯಲ್ಲಿ ಸಿಪಿಐ-ಎಂ ನೇತೃತ್ವದ ಎಡರಂಗ ಮತ್ತು ಕಾಂಗ್ರೆಸ್ ಕ್ರಮವಾಗಿ 47 ಮತ್ತು 13 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಸೀಟು ಹಂಚಿಕೆ ಒಪ್ಪಂದದಡಿಯಲ್ಲಿ ಸ್ಪರ್ಧಿಸುತ್ತಿವೆ.
ತ್ರಿಪುರಾದ ಅಭಿವೃದ್ಧಿ ಬಗ್ಗೆ ತಿಳಿಸಿದ ಪ್ರಧಾನಿ, ಜನರು ಅಗರ್ತಲಾ ವಿಮಾನ ನಿಲ್ದಾಣವನ್ನು ನೋಡಿದರೆ ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂಬುದು ಅರಿವಾಗುತ್ತದೆ ಎಂದು ಹೇಳಿದರು. ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕವು ತ್ರಿಪುರಾದ ಎಲ್ಲಾ ಭಾಗಗಳನ್ನು ತಲುಪಿದೆ ಮತ್ತು ಈಗ 4G ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಮೋದಿ ಹೇಳಿದರು.