ವಾಷಿಂಗ್ಟನ್,ಅ.23 : ಕೊರೊನಾ ಲಸಿಕಾ ಶಕ್ತಿಕೇಂದ್ರವಾಗಿ ಹೊರಹೊಮ್ಮಿರುವ ಭಾರತ ಸಹಕಾರದೊಂದಿಗೆ ಲಸಿಕೆ ಉತ್ಪಾದನಾ ಕಾರ್ಯದಲ್ಲಿ ಕೈಜೋಡಿಸಲು ನಾವು ಸಿದ್ದರಿದ್ದೇವೆ ಎಂದು ಅಮೆರಿಕಾ ಅಂತಾರಾಷ್ಟ್ರೀಯ ಅಭಿವೃದ್ಧಿ ಫೈನಾನ್ಸ್ ಕಾರ್ಪೊರೇಷನ್ ಮುಖ್ಯಸ್ಥ ಡೇವಿಡ್ ಮರ್ಚಿಕ್ ಹೇಳಿದ್ದಾರೆ.
ಅಮೆರಿಕಾ ಅಭಿವೃದ್ದಿ ಬ್ಯಾಂಕ್ ಆಗಿರುವ ಡಿಎಫ್‍ಸಿ ಸಂಸ್ಥೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಂಡವಾಳ ಹೂಡುತ್ತಿರುವ ಮಹತ್ವದ ಸಂಸ್ಥೆಯಾಗಿದೆ. ಹೀಗಾಗಿ ಭಾರತದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿರುವ ಡಿಎಫ್‍ಸಿ ಮುಖ್ಯಸ್ಥ ಮರ್ಚಿಕ್ ಅವರು ಇದೇ 24 ರಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಭಾರತ ಮತ್ತು ಅಮೆರಿಕಾದ ನಡುವೆ ಉತ್ತಮ ಬಾಂಧವ್ಯವಿದ್ದು, ಆ ದೇಶದಲ್ಲಿ ಬಂಡವಾಳ ಹೂಡಲು ನಾವು ತುದಿಗಾಲಲ್ಲಿ ನಿಂತಿದ್ದೇವೆ. ನಾವು ಇದುವರೆಗೂ ಭಾರತದಲ್ಲಿ ಕೋಟ್ಯಂತರ ರೂ.ಬಂಡವಾಳ ಹೂಡಿಕೆ ಮಾಡಿದ್ದು, ಲಸಿಕಾ ಉತ್ಪಾದನಾ ಕ್ಷೇತ್ರದಲ್ಲೂ ಬಂಡವಾಳ ಹೂಡಲು ತೀರ್ಮಾನಿಸಿದ್ದೇವೆ ಎಂದು ಮರ್ಚಿಕ್ ತಿಳಿಸಿದ್ದಾರೆ.