ಢಾಕಾ,ಡಿ.15 : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಾಂಗ್ಲಾದೇಶಕ್ಕೆ ಮೂರು ದಿನಗಳ ಭೇಟಿ ನಿಮಿತ್ತ ಇಂದು ಇಲ್ಲಿಗೆ ಆಗಮಿಸಿದರು. ಭೇಟಿ ಅವಧಿಯಲ್ಲಿ ಅವರು ತಮ್ಮ ಬಾಂಗ್ಲಾದೇಶ ಸಹವರ್ತಿಯ ಜೊತೆಗೆ ಮಾತುಕತೆ ನಡೆಸಲಿದ್ದಾರೆ. 1971ರಲ್ಲಿ ಪಾಕಿಸ್ತಾನದಿಂದ ಸ್ವತಂತ್ರವಾದ ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಪಿಡುಗಿನ ಬಳಿಕ ಇದು ರಾಷ್ಟ್ರಪತಿ ಕೋವಿಂದ್ ಅವರ ಮೊದಲ ವಿದೇಶ ಪ್ರವಾಸವಾಗಿದೆ. ಇಲ್ಲಿ ನಡೆಯಲಿರುವ ಬಾಂಗ್ಲಾದೇಶದ ಸ್ವರ್ಣಮಹೋತ್ಸವದಲ್ಲಿ ಕೋವಿಂದ್ ಅವರು ಗಣ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಉಭಯ ದೇಶಗಳ ನಿಕಟ ಸಂಬಂಧಗಳ ಪ್ರತಿಬಿಂಬವಾಗಿ ಭಾರತ ಕೂಡ ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾದ 1971ರ ಭಾರತ-ಪಾಕಿಸ್ತಾನ ಯುದ್ಧದ 50ನೇ ವರ್ಷಾಚರಣೆ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮಂಗಳವಾರ ಇಲ್ಲಿ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ.ಎ.ಕೆ.ಅಬ್ದುಲ್ ಮೊಮೆನ್ ಅವರು ರಾಷ್ಟ್ರಪತಿ ಕೋವಿಂದ್ ಅವರ ಭೇಟಿ ಶಿಷ್ಟಾಚಾರದ್ದಾಗಿದೆ ಎಂದು ಕರೆದರಲ್ಲದೆ ಈ ಪ್ರವಾಸದ ಅಂಗವಾಗಿ ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಸಮಸ್ಯೆಗಳ ಪರಾಮರ್ಶೆಯೂ ನಡೆಯುವ ನಿರೀಕ್ಷೆ ಇದೆ ಎಂದು ಒತ್ತಿ ಹೇಳಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಡಿಸೆಂಬರ್ 15-17ರವರೆಗೆ ಬಾಂಗ್ಲಾದೇಶದ ಅಧ್ಯಕ್ಷ ಎಂ.ಅಬ್ದುಲ್ ಹಮೀದ್ ಅವರ ಆಹ್ವಾನದ ಮೇರೆಗೆ ಉಭಯ ನೆರೆಹೊರೆ ರಾಷ್ಟ್ರಗಳ ನಡುವಿನ ಉತ್ತಮ ಸಂಬಂಧಗಳ ಕುರುಹಾಗಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೊಮೆನ್ ಹೇಳಿದರು.